ADVERTISEMENT

ಮಹಾರಾಷ್ಟ್ರದ ಈ ಊರು ಜಾತಿಯಿಂದ ಮುಕ್ತ ಮುಕ್ತ...

‘ನಮ್ಮದು ಮನುಷ್ಯ ಜಾತಿ’ ಎನ್ನುತ್ತಿದೆ ಮಹಾರಾಷ್ಟ್ರದ ಸೌಂದಾಳಾ l ಪಂಚಾಯಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ

ಮೃತ್ಯುಂಜಯ ಬೋಸ್
Published 13 ಫೆಬ್ರುವರಿ 2026, 0:30 IST
Last Updated 13 ಫೆಬ್ರುವರಿ 2026, 0:30 IST
<div class="paragraphs"><p>ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ಸೌಂದಾಳಾ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರು ನಿಂತಿರುವುದು</p></div>

ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ಸೌಂದಾಳಾ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರು ನಿಂತಿರುವುದು

   

ಮುಂಬೈ: ಜಾತಿ ವಿಚಾರವಾಗಿ ನಡೆಯುತ್ತಿರುವ ರಾಜಕಾರಣ, ಸಂಘರ್ಷ ಭಾರತೀಯ ಸಮಾಜವನ್ನು ವಿಭಜಿಸುವುದು ಈಗಲೂ ನಿಂತಿಲ್ಲ. ಜಾತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳೂ ಮುಂದುವರಿದಿವೆ.

ಆದರೆ, ಮಹಾರಾಷ್ಟ್ರದ ಪುಟ್ಟ ಗ್ರಾಮವೊಂದಲ್ಲಿ ಸಣ್ಣ ಪ್ರಮಾಣದಲ್ಲಿ ಆದರೆ, ಗಮನಾರ್ಹ ಸಾಮಾಜಿಕ ಕ್ರಾಂತಿಯೊಂದು ನಡೆಯುತ್ತಿದೆ. ಅಹಿಲ್ಯಾನಗರ (ಈ ಹಿಂದಿನ ಅಹ್ಮದ್‌ನಗರ) ಜಿಲ್ಲೆಯ ನೆವಾಸ ತಾಲ್ಲೂಕಿನ ಪುಟ್ಟ ಗ್ರಾಮ ಸೌಂದಾಳಾ ಇಂತಹ ಪ್ರಗತಿಪರ ಸಾಮಾಜಿಕ ಸುಧಾರಣೆಗಳಿಗೆ ತನ್ನನ್ನು ತೆರೆದುಕೊಂಡಿದೆ.
‘ಸೌಂದಳಾ ಈಗ ಜಾತಿ ಮುಕ್ತ ಗ್ರಾಮ’ ಎಂದು ಗ್ರಾಮಸ್ಥರು ಘೋಷಿಸಿಕೊಂಡಿದ್ದಾರೆ. ಈ ಮೂಲಕ, ಜಾತಿಗಿಂತ ಮಾನವೀಯತೆಯೇ ದೊಡ್ಡದು ಎಂಬ ಸಂದೇಶವನ್ನು ಸಾರಿದ್ದಾರೆ.

ADVERTISEMENT

‘ಅಮ್ಚಿ ಜಾತ್‌... ಮಾನವ್’(ನಮ್ಮದು ಮನುಷ್ಯ ಜಾತಿ) ಎಂಬುದು ನಮ್ಮ ಮಾರ್ಗದರ್ಶಿ ತತ್ವ ಎಂದು ಗ್ರಾಮಸ್ಥರು ಘೋಷಿಸಿಕೊಂಡಿದ್ದಾರೆ. ‘ಈ ರೀತಿ ಜಾತಿ ಮುಕ್ತ ಗ್ರಾಮವೊಂದು ಇರುವುದು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಮೊದಲು ಇರಬಹುದು’ ಎಂದೂ ಹೇಳಿಕೊಂಡಿದ್ದಾರೆ. ಫೆಬ್ರುವರಿ 5ರಂದು ನಡೆದ ಗ್ರಾಮ ಪಂಚಾಯಿತಿ ಸಭೆಯಲ್ಲಿ ಈ ಕುರಿತ ನಿರ್ಣಯವನ್ನು ಸರ್ವಾನುಮತದಿಂದ
ಅನುಮೋದಿಸಲಾಗಿದೆ.

‘ಇದು ಸಣ್ಣ ಪ್ರಯತ್ನವಾದರೂ, ದೂರಗಾಮಿ ಪರಿಣಾಮ ಬೀರುವಂಥದ್ದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶರದ್‌ ಅರ್ಗಾಡೆ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಾತಿ ಮುಕ್ತ ಗ್ರಾಮ ಎಂಬ ನಿರ್ಣಯ ಕೈಗೊಳ್ಳುವ ಸಂಬಂಧ ನಡೆದ ಸಭೆಯಲ್ಲಿ ವಿವಿಧ ಜಾತಿಗಳಿಗೆ ಸೇರಿದ ಜನರು ಪಾಲ್ಗೊಂಡಿದ್ದರು. ಮುಸ್ಲಿಂ ಸಮುದಾಯದವರು ಕೂಡ ಹಾಜರಿದ್ದರು. ಎಲ್ಲರೂ ಈ ನಿರ್ಣಯದ ಪರವಾಗಿ ಮತ ಚಲಾಯಿಸಿದರು’ ಎಂದು ಶರದ್ ತಿಳಿಸಿದರು.

ಸಂವಿಧಾನ ಪೀಠಿಕೆ ಉಲ್ಲೇಖ...

ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು, ಸಂವಿಧಾನ ಪೀಠಿಕೆ ಉಲ್ಲೇಖಿಸುವುದರೊಂದಿಗೆ ಆರಂಭಿಸಲಾಗಿದೆ. ಮುಖ್ಯವಾಗಿ ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವದಂತಹ ಮೌಲ್ಯಗಳನ್ನು ಉಲ್ಲೇಖಿಸಲಾಗಿದೆ.

‘ಗ್ರಾಮದಲ್ಲಿ ಯಾರೊಬ್ಬರೂ ಜಾತಿ ಪದ್ಧತಿ ಅನುಸರಿಸಬಾರದು ಅಥವಾ ಜಾತಿ ಆಧಾರಿತ ಪದ್ಧತಿಗಳನ್ನು ಪಾಲನೆ ಮಾಡಬಾರದು ಎಂಬ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ‘ಮಾನವೀಯತೆಯೇ ನಮ್ಮ ಜಾತಿ’ ಎಂಬ ತತ್ವವೇ ನಮಗೆ ಮಾರ್ಗದರ್ಶಿಯಾಗಬೇಕು’ ಎಂದು ನಿರ್ಣಯಿಸಲಾಗಿದೆ

-ಶರದ್‌ ಅರ್ಗಾದೆ, ಸೌಂದಾಳಾ ಗ್ರಾಮ ಪಂಚಾಯಿತಿ ಸದಸ್ಯ

‘ದಂಡಕ್ಕೂ ಅವಕಾಶ’

ಗ್ರಾಮದಲ್ಲಿ ಯಾರಾದರೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು ಕಂಡುಬಂದಲ್ಲಿ ಅವರಿಗೆ ದಂಡ ವಿಧಿಸುವುದಕ್ಕೂ ನಿರ್ಣಯದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಖ್ಯಾತ ಸಮಾಜ ಸೇವಕ ಹಾಗೂ ಮಹಾತ್ಮ ಫುಲೆ ಸಮಾಜ ಸೇವಾ ಮಂಡಲದ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಝಿಂಜಾಡೆ ಅವರ ಸಲಹೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಸೊಲ್ಲಾಪುರದಲ್ಲಿರುವ ಪ್ರಮೋದ್ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ,‘ನನಗೆ ಜಾತಿ ಪದ್ಧತಿಯಲ್ಲಿ ನಂಬಿಕೆ ಇಲ್ಲ. ಮಾನವೀಯತೆಯೇ ದೊಡ್ಡ ಜಾತಿ ಹಾಗೂ ಧರ್ಮ’ ಎಂದು ಹೇಳಿದರು.

‘ಸಮಾಜದಲ್ಲಿ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಶ್ರಮಿಸಬೇಕು ಎಂದು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ನಾನು ಮನವಿ ಮಾಡಿದ್ದೆ. ಈ ನಿಟ್ಟಿನಲ್ಲಿ ಸೌಂದಾಳಾ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಮುಂದಡಿ ಇಟ್ಟಿದೆ’ ಎಂದರು.

ಹಲವು ಪ್ರಗತಿಪರ ನಿರ್ಣಯ ಕೈಗೊಂಡ ಗ್ರಾಮವಿದು

ಜಾತಿ ಮುಕ್ತ ಗ್ರಾಮವನ್ನಾಗಿ ಘೋಷಿಸುವ ಮೂಲಕ ಗಮನ ಸೆಳೆದಿರುವ ಸೌಂದಾಳಾ, ಈ ಹಿಂದೆಯೇ ಹಲವು ಪ್ರಗತಿಪರ ನಿರ್ಣಯಗಳನ್ನು ಸಹ ಕೈಗೊಂಡಿದೆ.

ಲಿಂಗತ್ವ ಸಂದೇದನಾಶೀಲತೆ, ಬಾಲ್ಯ ವಿವಾಹ ಪದ್ಧತಿ ನಿಷೇಧ, ವಿಧವೆಯರ ಮರುವಿವಾಹ, ಕೌಟುಂಬಿಕ ದೌರ್ಜನ್ಯ ಹಾಗೂ ವರದಕ್ಷಿಣಿ ಕಿರುಕುಳದ ವಿರುದ್ಧ ಕ್ರಮ, ಬಾಲಕಿಯರ ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಮಹಿಳೆಯರು ಕೂಡ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗುವುದನ್ನು ಪ್ರೋತ್ಸಾಹಿಸುವಂತಹ ಕ್ರಮಗಳನ್ನು ಗ್ರಾಮಸ್ಥರು ಕೈಗೊಂಡಿರವುದು ವಿಶೇಷ.

ಹತ್ತಕ್ಕೂ ಅಧಿಕ ಗ್ರಾಮಗಳು ಜಾತಿ ಪದ್ಧತಿ ಯಿಂದ ಮುಕ್ತವಾಗಲು ಆಸಕ್ತಿ ತೋರಿವೆ. ಈ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ ಏಪ್ರಿಲ್‌ನಲ್ಲಿ ಈ ಗ್ರಾಮ ಪಂಚಾಯಿತಿಗಳ ಸದಸ್ಯರ ಸಭೆ ಕರೆಯಲಾಗಿದೆ
ಪ್ರಮೋದ್‌ ಝಿಂಜಾಡೆ, ಸಮಾಜ ಸೇವಕ, ಸೊಲ್ಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.