ADVERTISEMENT

ಲಾಕ್‌ಡೌನ್‌ ಹೊಡೆತ: ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಮಗ

ಪಿಟಿಐ
Published 20 ಜೂನ್ 2021, 13:46 IST
Last Updated 20 ಜೂನ್ 2021, 13:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔರಂಗಾಬಾದ್: ಲಾಕ್‌ಡೌನ್‌ನಿಂದ ಎದುರಾದ ಆರ್ಥಿಕ ಸಂಕಷ್ಟಗಳಿಂದ ಪುತ್ರನೊಬ್ಬ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ ವಿಲಕ್ಷಣ ಪ್ರಸಂಗ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ.

ಸುಮಾರು 60 ವಯಸ್ಸಿನ ಕಿರಣ್‌ ಪಾರ್ಡಿಕರ್‌ ವೃದ್ಧಾಶ್ರಮ ಸೇರಿದವರು. ಹಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅವರು, ಟೈಲರಿಂಗ್‌ ಕೆಲಸ ಮಾಡಿ ಮಗನನ್ನು ಬೆಳೆಸಿದ್ದರು.

‘ದೊಡ್ಡವನಾದ ಬಳಿಕ ಮಗ ಜೀವನೋಪಾಯಕ್ಕಾಗಿ ಪುಣೆಯ ನ್ಯಾಯಾಲಯದ ಬಳಿ ಪುಸ್ತಕದ ಅಂಗಡಿಯಿಟ್ಟ. ಆದರೆ ಕೊರೊನಾ ವೈರಸ್‌ ಹಾವಳಿ ಮತ್ತು ಲಾಕ್‌ಡೌನ್‌ನಿಂದ ಕಳೆದ ವರ್ಷವೇ ಅಂಗಡಿಗೆ ಬೀಗ ಬಿದ್ದು ವ್ಯವಹಾರ ಸ್ಥಗಿತವಾಗಿತ್ತು’ ಎಂದು ಪುಂಡಾಲಿಕ್‌ನಗರದ ಠಾಣೆಯ ಎಎಸ್‌ಐ ಘನಶ್ಯಾಮ್‌ ಸೋನಾವಾನೆ ತಿಳಿಸಿದ್ದಾರೆ.

ADVERTISEMENT

ಅತ್ತೆ–ಸೊಸೆಯರಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪಾರ್ಡಿಕರ್‌ ಅವರು ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಾಯಿ ಉಳಿದಿದ್ದ ಕೊಠಡಿಯ ಬಾಡಿಗೆ ಮತ್ತು ಆಹಾರದ ವ್ಯವಸ್ಥೆಯನ್ನು ಅವರ ಪುತ್ರ ನೋಡಿಕೊಳ್ಳುತ್ತಿದ್ದ.

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಗನ ಸ್ಥಿತಿ ನೋಡಿ ತಾಯಿಯು ತನ್ನನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು. ಅವರಿಗೆ ಹೊಸ ಬಟ್ಟೆಗಳನ್ನು ಕೊಡಿಸಿ, ‘ಮಾತೂಶ್ರಿ ವೃದ್ಧಾಶ್ರಮಕ್ಕೆ’ ಸೇರಿಸಿದ್ದೇವೆ. ಇದಕ್ಕೆ ಪುತ್ರನ ಸಹಮತವೂ ಇದೆ ಎಂದು ಸೋನಾವಾನೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.