ADVERTISEMENT

ಮಹಾರಾಷ್ಟ್ರ: ಠಾಣೆ, ಪಾಲ್ಘರ್‌ನಲ್ಲಿ ಭಾರಿ ಮಳೆ; ಬಾಲಕ ಸಾವು

ಪಿಟಿಐ
Published 19 ಜುಲೈ 2021, 5:47 IST
Last Updated 19 ಜುಲೈ 2021, 5:47 IST
ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ನಲ್ಲಸೊಪರದ ಜಲಾವೃತ್ತಗೊಂಡಿರುವ ರಸ್ತೆ–ಪಿಟಿಐ ಚಿತ್ರ
ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ನಲ್ಲಸೊಪರದ ಜಲಾವೃತ್ತಗೊಂಡಿರುವ ರಸ್ತೆ–ಪಿಟಿಐ ಚಿತ್ರ   

ಠಾಣೆ/ಪಾಲ್ಘರ್‌: ಮಹಾರಾಷ್ಟ್ರದ ಠಾಣೆ ಮತ್ತು ಪಾಲ್ಘರ್‌ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಸುರಿದ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಇದರಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

‘ಭಾನುವಾರ ರಾತ್ರಿ 9.30 ರಿಂದ ಸೋಮವಾರ ಬೆಳಿಗ್ಗೆ 7.30ರ ನಡುವೆ ಠಾಣೆ ನಗರದಲ್ಲಿ 151.33 ಮಿ.ಮೀ ಮಳೆ ಸುರಿದಿದೆ’ ಎಂದು ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಇದೇ ಅವಧಿಯಲ್ಲಿ ಪಾಲ್ಘರ್‌ ಜಿಲ್ಲೆಯಲ್ಲಿ 108.67 ಮಿ.ಮೀ ಮಳೆ ಸುರಿದಿದೆ’ ಎಂದು ಅಧಿಕಾರಿಗಳು ಹೇಳಿದರು.

ADVERTISEMENT

‘ಈ ಎರಡೂ ಜಿಲ್ಲೆಗಳಲ್ಲಿ ಹಲವು ಮರಗಳು ಧರೆಗುರುಳಿವೆ. ಠಾಣೆ ಜಿಲ್ಲೆಯ ಉಲ್ಲಾಸ್‌ನಗರದಲ್ಲಿ ಭಾನುವಾರ ನಾಲ್ಕು ವರ್ಷದ ಬಾಲಕ ಉಕ್ಕಿ ಹರಿದ ಚರಂಡಿ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ’ ಎಂದು ಪೊಲೀಸ್‌ ಕಂಟ್ರೋಲ್‌ ರೂಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಠಾಣೆ ನಗರದ ಘೋಡ್‌ಬಂದರ್ ರಸ್ತೆಯಲ್ಲಿರುವ ಹೌಸಿಂಗ್‌ ಕಾಂಪ್ಲೆಕ್ಸ್‌ವೊಂದರ ಗೋಡೆ ಕುಸಿದಿದ್ದು,ಇದರಲ್ಲಿ ಐದು ಕಾರುಗಳು ಸೇರಿದಂತೆ ಹಲವು ವಾಹನಗಳಿಗೆ ಹಾನಿಯಾಗಿದೆ. ಇಲ್ಲಿಯೇ ಕಟ್ಟಡವೊಂದರ ವಾಚ್‌ಮ್ಯಾನ್‌ ಮೇಲೆ ಮರ ಬಿದ್ದಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಹಲವು ತಗ್ಗು ಪ್ರದೇಶಗಳಲ್ಲಿ ಗೋಡೆ ಕುಸಿತ ಮತ್ತು ಪ್ರವಾಹ ಸಂಬಂಧಿತ ಘಟನೆಗಳು ವರದಿಯಾಗಿವೆ’ ಎಂದು ನಗರ ಪಾಲಿಕೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್‌ ಕದಂ ಅವರು ಹೇಳಿದರು.

‘ಪಾಲ್ಘರ್‌ನ ವಸಾಯಿ ಮತ್ತು ನಲ್ಲಸೊಪರದಲ್ಲೂ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿವೆ. ಈ ವೇಳೆ ನಲ್ಲಸೊಪರದಲ್ಲಿ ತೆರೆದ ಚರಂಡಿಗೆ 4 ವರ್ಷದ ಬಾಲಕನೊಬ್ಬ ಬಿದ್ದಿದ್ದು, ಆತ ನೀರಿನಲ್ಲಿ ಮುಳುಗಿರುವ ಸಾಧ್ಯತೆಗಳಿವೆ. ಬಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ವಸಾಯಿ–ವಿಹಾರಾ ನಗರ ಪಾಲಿಕೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ದಿಲೀಪ್‌ ಪಲ್ಲವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.