ADVERTISEMENT

ಮುಗ್ಗರಿಸುತ್ತಿದೆ ಮಹಾತ್ಮಾ ಗಾಂಧಿ ಸಂಸ್ಥಾಪಿಸಿದ ವಿ.ವಿ

ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 16:04 IST
Last Updated 29 ಜನವರಿ 2021, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ಅಂದಾಜು ನೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಚಳವಳಿ ವೇಳೆ ಮಹಾತ್ಮ ಗಾಂಧಿ ಅವರು ಸ್ಥಾಪಿಸಿದ ‘ಗುಜರಾತ್‌ ವಿದ್ಯಾಪೀಠ’ ಡೀಮ್ಡ್‌ ವಿಶ್ವವಿದ್ಯಾಲಯವು, ಪ್ರಸ್ತುತ ಆರ್ಥಿಕ ಸಂಕಷ್ಟದಿಂದ ಒದ್ದಾಡುತ್ತಿದೆ.

ಕೇಂದ್ರದ ಶಿಕ್ಷಣೆ ಇಲಾಖೆ ಹಾಗೂವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಈ ವಿಶ್ವವಿದ್ಯಾಲಯಕ್ಕೆ ವೇತನ ಹಾಗೂ ಪಿಂಚಣಿ ರೂಪದಲ್ಲಿ ನೀಡಬೇಕಾದ ಕೋಟ್ಯಂತರ ರೂಪಾಯಿ ಅನುದಾನವನ್ನು ಹಿಡಿದಿಟ್ಟುಕೊಂಡಿರುವುದೇ ವಿಶ್ವವಿದ್ಯಾಲಯದ ಈ ಸ್ಥಿತಿಗೆ ಕಾರಣ ಎನ್ನಲಾಗಿದೆ. ಮುಂದಿನ ತಿಂಗಳು ವೇತನ ಸಿಗುತ್ತದೆಯೇ ಇಲ್ಲವೇ ಎನ್ನುವ ಅನಿಶ್ಚಿತ ಸ್ಥಿತಿಯಲ್ಲಿ ಇಲ್ಲಿನ ಸಿಬ್ಬಂದಿಯಿದ್ದು, ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಹಲವು ಬಾರಿ ಅಹವಾಲು ಸಲ್ಲಿಸಿದ್ದಾರೆ.

1918ರ ಅಕ್ಟೋಬರ್‌ನಲ್ಲಿ ಗಾಂಧಿ ಈ ವಿ.ವಿಯನ್ನು ಸ್ಥಾಪಿಸಿದರು. ಸೂಕ್ತ ಪ್ರಕ್ರಿಯೆಯನ್ನು ಪಾಲಿಸಿಲ್ಲ ಎನ್ನುವ ಕಾರಣಕ್ಕೆ ಯುಜಿಸಿಯು, ಕಳೆದ ಡಿಸೆಂಬರ್‌ನಲ್ಲಿ ನೂತನ ಕುಲಪತಿ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು. ಈ ಕಾರಣದಿಂದ ಪ್ರಸ್ತುತ ಇರುವ ಕುಲಪತಿ ಅನಾಮಿಕ್‌ ಶಾ ಅವರ ಅವಧಿಯನ್ನು ಆರು ತಿಂಗಳು ವಿಸ್ತರಿಸಬೇಕಾದ ಅನಿವಾರ್ಯತೆ ವಿ.ವಿಗೆ ಉಂಟಾಗಿತ್ತು. ಹೊಸ ಕುಲಪತಿ ನೇಮಕಕ್ಕೆ ಮತ್ತೆ ಹೊಸದಾಗಿ ಪ್ರಕ್ರಿಯೆ ಆರಂಭಿಸುವುದಕ್ಕೆ ವಿ.ವಿ ಒಪ್ಪಿದ್ದರೂ, ಯುಜಿಸಿ ಈ ಕುರಿತು ಮೌನವಾಗಿದೆ. ಅನುದಾನ ಹಿಡಿದಿಟ್ಟುಕೊಂಡಿರುವುದರ ಕುರಿತು ವಿ.ವಿ ಆಡಳಿತ ಮಂಡಳಿಯು ಶಿಕ್ಷಣ ಸಚಿವಾಲಯ ಹಾಗೂ ಯುಜಿಸಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಈ ಕುರಿತೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ADVERTISEMENT

ವಿದ್ಯಾಪೀಠದ ಸ್ವಾಯತ್ತತೆಯ ಕುರಿತು ವಿ.ವಿ ಹಾಗೂ ಯುಜಿಸಿ ನಡುವೆ ಇರುವ ಹಗ್ಗಜಗ್ಗಾಟವೇ ಈ ಸ್ಥಿತಿಗೆ ಕಾರಣ ಎಂದು ಮೂಲಗಳು ಹೇಳಿವೆ. ಸಂಸ್ಥೆಗೆ ಶೇ 100 ಅನುದಾನವನ್ನು ಯುಜಿಸಿ ನೀಡುತ್ತಿದ್ದರೂ, ಕುಲಾಧಿಪತಿ, ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ತನ್ನದೇ ಆದ ನಿಯಮಗಳನ್ನು ವಿ.ವಿ ಹೊಂದಿದೆ. ಕುಲಪತಿ ನೇಮಕ ಸಮಿತಿಯಲ್ಲಿ ಯುಜಿಸಿಯ ಸದಸ್ಯರೊಬ್ಬರನ್ನು ಸೇರಿಸುವುದಕ್ಕೆ 2016ರಲ್ಲಿ ವಿ.ವಿ ಒಪ್ಪಿಕೊಂಡಿತ್ತು. ಆದರೆ, ಕುಲಾಧಿಪತಿ ನೇಮಕಾತಿ ವಿಚಾರದಲ್ಲಿ ಸ್ವಾಯತ್ತತೆಯನ್ನು ವಿ.ವಿ ಬಯಸಿದೆ ಎನ್ನಲಾಗಿದೆ. ಈ ಹಿಂದೆ ವಿ.ವಿಗೆ ಗಾಂಧಿ, ಸರ್ದಾರ್‌ ವಲ್ಲಭಬಾಯಿ ಪಟೇಲ್‌, ರಾಜೇಂದ್ರ ಪ್ರಸಾದ್‌, ಮೊರಾರ್ಜಿ ದೇಸಾಯಿ ಮುಂತಾದವರು ಕುಲಾಧಿಪತಿಗಳಾಗಿದ್ದರು.

ಶುಕ್ರವಾರ ಕುಲಪತಿಯನ್ನು ಭೇಟಿಯಾದ ಉಪನ್ಯಾಸಕರ ತಂಡವೊಂದು, ವೇತನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದೆ. 2020ರ ಡಿಸೆಂಬರ್‌ವರೆಗೆ ₹40 ಕೋಟಿ ಅನುದಾನವನ್ನು ಯುಜಿಸಿ ಬಾಕಿ ಉಳಿಸಿಕೊಂಡಿದ್ದು, ಇದರಲ್ಲಿ ಬಹುತೇಕ ಅನುದಾನ ವೇತನ ಹಾಗೂ ಪಿಂಚಣಿಯದ್ದಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.