
ಚುನಾವಣೆ(ಸಾಂದರ್ಭಿಕ ಚಿತ್ರ)
ಮುಂಬೈ: ಮಹಾರಾಷ್ಟ್ರದ ಜಿಲ್ಲಾ ಪರಿಷದ್ ಮತ್ತು ಪಂಚಾಯತ್ ಸಮಿತಿ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ‘ಮಹಾಯುತಿ’ ಮೈತ್ರಿಕೂಟ ಭರ್ಜರಿ ಜಯ ಗಳಿಸಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
731 ಜಿಲ್ಲಾ ಪರಿಷದ್ ಸ್ಥಾನಗಳ ಪೈಕಿ 552ರಲ್ಲಿ ಮತ್ತು 1,462 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ 1000ಕ್ಕೂ ಹೆಚ್ಚು ಸ್ಥಾನಗಳಲ್ಲಿ ‘ಮಹಾಯುತಿ’ ಮೈತ್ರಿಕೂಟ ಗೆದ್ದಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಆಡಳಿತಾರೂಢ ಬಿಜೆಪಿ 225 ಜಿಲ್ಲಾ ಪಂಚಾಯಿತಿ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅದರ ಮಿತ್ರ ಪಕ್ಷಗಳಾದ ಎನ್‌ಸಿಪಿ ಮತ್ತು ಶಿವಸೇನಾ ಕ್ರಮವಾಗಿ 165 ಮತ್ತು 162 ಸ್ಥಾನಗಳಲ್ಲಿ ಜಯಿಸಿವೆ.
ವಿರೋಧ ಪಕ್ಷಗಳ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಯಲ್ಲಿನ ಕಾಂಗ್ರೆಸ್ 55 ಜಿಲ್ಲಾ ಪಂಚಾಯಿತಿಗಳಲ್ಲಿ ಗೆದ್ದಿದ್ದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) 43 ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) 26 ಸ್ಥಾನಗಳಲ್ಲಿ ಜಯ ಗಳಿಸಿದೆ.
125 ಪಂಚಾಯತ್ ಸಮಿತಿಗಳಲ್ಲಿನ 1,462 ಸ್ಥಾನಗಳಲ್ಲಿ ಬಿಜೆಪಿ 459ರಲ್ಲಿ, ಅದರ ಮಿತ್ರ ಪಕ್ಷಗಳಾದ ಎನ್‌ಸಿಪಿ 306 ಮತ್ತು ಶಿವಸೇನಾ 302 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಕಾಂಗ್ರೆಸ್ 97, ಶಿವಸೇನಾ (ಯುಬಿಟಿ) 89 ಮತ್ತು ಎನ್‌ಸಿಪಿ (ಎಸ್‌ಪಿ) 46 ಸ್ಥಾನಗಳಲ್ಲಿ ಜಯಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.