ಮಹಾ ಕುಂಭ ಮೇಳ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಮನೋಜ್‌ಕುಮಾರ್ ಹಾಘೂ ಡಿಜಿಪಿ ಪ್ರಶಾಂತಕುಮಾರ್ ಅವರು ಮೇಳ ಪ್ರದೇಶದಲ್ಲಿ ನಿರ್ಮಿಸಿರುವ ಕಾವಲುಗೋಪುರದಿಂದ ಪರಿಶೀಲನೆ ನಡೆಸಿದರು
–ಪಿಟಿಐ ಚಿತ್ರ
ಲಖನೌ: ಮಹಾ ಕುಂಭಮೇಳದಲ್ಲಿ ‘ಮೌನಿ ಅಮಾವಾಸ್ಯೆ’ಯಂದು ಕಾಲ್ತುಳಿತ ಘಟನೆ ಸಂಭವಿಸಿದ ನಂತರ, ಉತ್ತರ ಪ್ರದೇಶ ಸರ್ಕಾರವು ಮೇಳದ ವಲಯದ ವ್ಯವಸ್ಥೆಯಲ್ಲಿ ಗುರುವಾರ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ.
ದಟ್ಟಣೆ ನಿರ್ವಹಣೆ ಹಾಗೂ ಭಕ್ತರ ಸುರಕ್ಷತೆ ಖಾತ್ರಿಪಡಿಸುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ.
ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನ ಮೃತಪಟ್ಟಿದ್ದರು ಎಂಬ ಮಾಹಿತಿಯನ್ನಷ್ಟೆ ನೀಡಿರುವ ಸರ್ಕಾರ, ಅವಘಡಕ್ಕೆ ಸಂಬಂಧಿಸಿ ಯಾವುದೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಮೇಳಕ್ಕೆ ಬರುವ ಗಣ್ಯರಿಗೆ ನೀಡಲಾಗುತ್ತಿದ್ದ ‘ವಿಐಪಿ ಪಾಸ್’ಗಳನ್ನು ರದ್ದುಪಡಿಸಲಾಗಿದೆ. ಮೇಳ ನಡೆಯುವ ಪ್ರದೇಶವನ್ನು ‘ವಾಹನಗಳ ರಹಿತ’ ವಲಯ ಎಂಬುದಾಗಿ ಆಡಳಿತ ಘೋಷಿಸಿದೆ. ಆಂಬುಲೆನ್ಸ್ ಹೊರತಾಗಿ ಇತರ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಮುಖ ಧಾರ್ಮಿಕ ಸ್ಥಳಗಳಾದ ಅಯೋಧ್ಯೆ, ವಾರಾಣಸಿ ಹಾಗೂ ಚಿತ್ರಕೂಟಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಈ ಸ್ಥಳಗಳಲ್ಲಿ ಕೂಡ ಅಧಿಕಾರಿಗಳು ಹೆಚ್ಚು ಜಾಗ್ರತೆ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಎಲ್ಲ ಹೊಸ ವ್ಯವಸ್ಥೆಗಳು ವಸಂತ ಪಂಚಮಿ ದಿನವಾದ ಫೆ.3ರ ವರೆಗೆ ಜಾರಿಯಲ್ಲಿ ಇರಲಿವೆ. ವಸಂತ ಪಂಚಮಿಯಂದು ಮೂರನೇ ಪ್ರಮುಖ ಸ್ನಾನ (ಅಮೃತ ಸ್ನಾನ) ನಡೆಯಲಿದೆ.
‘ವಸಂತ ಪಂಚಮಿಯಂದು ನಡೆಯುವ ‘ಅಮೃತ ಸ್ನಾನ’ಕ್ಕಾಗಿ ಭಾರಿ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದ್ದು, ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಮಹಾ ಕುಂಭದ ಡಿಐಜಿ ವೈಭವ ಕೃಷ್ಣ ತಿಳಿಸಿದ್ದಾರೆ.
‘ಗುರುವಾರ ದಟ್ಟಣೆ ಕಡಿಮೆ ಇತ್ತು. ಎಲ್ಲ ಸೇತುವೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ’ ಎಂದೂ ತಿಳಿಸಿದ್ದಾರೆ.
ಭಕ್ತರು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದ ಕಾರಣ, ಪ್ರಯಾಗ್‌ರಾಜ್‌ನ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣ ಬಳಿ ಭಾರಿ ದಟ್ಟಣೆ ಕಂಡು ಬಂತು. ಜನರ ಸುರಕ್ಷಿತ ನಿರ್ಗಮನಕ್ಕೆ ಅಧಿಕಾರಿಗಳು ಆದ್ಯತೆ ನೀಡುತ್ತಿದ್ದು ಕಂಡುಬಂತು.
ಪರಿಶೀಲನೆ: ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಹಾಗೂ ಡಿಜಿಪಿ ಪ್ರಶಾಂತಕುಮಾರ್ ಅವರು ಮಹಾ ಕುಂಭ ಮೇಳ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.
ಮನೋಜ್ ಕುಮಾರ್ ಸಿಂಗ್ ಹಾಗೂ ಡಿಜಿಪಿ ಪ್ರಶಾಂತಕುಮಾರ್ ಅವರು, ಮೇಳ ಪ್ರದೇಶದಲ್ಲಿ ನಿರ್ಮಿಸಿರುವ ಕಾವಲುಗೋಪುರವೊಂದರಲ್ಲಿ ನಿಂತು, ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು ಎಂದು ಮೂಲಗಳು ಹೇಳಿವೆ.
ಪ್ರಧಾನಿ ಮೋದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಹಾ ಕುಂಭದಲ್ಲಿನ ಅವಘಡದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕುನಾನಾ ಪಟೋಲೆ ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ
* ಮೇಳ ವಲಯದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿ. ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ಮಾರ್ಗಗಳ ವ್ಯವಸ್ಥೆ
* ಪ್ರಯಾಗ್‌ರಾಜ್‌ಗೆ ಬರುವ ವಾಹನಗಳ ನಿಲುಗಡೆಗೆ ನಗರದ ಗಡಿಯಲ್ಲಿ ವ್ಯವಸ್ಥೆ
* ಮೇಳದ ಆಡಳಿತಕ್ಕೆ ನೆರವಾಗುವುದಕ್ಕೆ ವಿಶೇಷ ಕಾರ್ಯದರ್ಶಿ ಶ್ರೇಣಿಯ ಐವರು ಹಿರಿಯ ಅಧಿಕಾರಿಗಳ ನಿಯೋಜನೆ
* ಭಕ್ತರನ್ನು ವಿವಿಧ ರಾಜ್ಯಗಳಿಗೆ ಕರೆದೊಯ್ಯಲು ರಾಜ್ಯ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
* ಅಯೋಧ್ಯೆಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ
* ಭಕ್ತರು ರಾತ್ರಿ ತಂಗುವುದಕ್ಕಾಗಿ ವಾರಾಣಸಿ ರೈಲು ನಿಲ್ದಾಣ ಬಳಿ ತಾತ್ಕಾಲಿಕ ಟೆಂಟ್‌ಗಳ ನಿರ್ಮಾಣ
* ವಾಹನಗಳು ಚಿತ್ರಕೂಟ ಪ್ರವೇಶಿಸುವುದಕ್ಕೂ ನಿಷೇಧ
ಗುರುವಾರ ಸೂರ್ಯೋದಯಕ್ಕೂ ಮುನ್ನ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಹಿಂದಿನ ದಿನವಷ್ಟೇ ಕಾಲ್ತುಳಿತದಂತಹ ಅವಘಡ ನಡೆದಿದ್ದರೂ ಭಕ್ತರಲ್ಲಿ ಉತ್ಸಾಹ ಕುಂದಿರಲಿಲ್ಲ ಎಂಬಂತಹ ದೃಶ್ಯ ಕಂಡು ಬಂತು. ಮಧ್ಯಾಹ್ನ 2ರ ವರೆಗೆ 1.52 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಮಹಾ ಕುಂಭ ಆರಂಭಗೊಂಡಾಗಿನಿಂದ ಈವರೆಗೆ 27.58 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಯಾತ್ರಾರ್ಥಿಗಳು ವಿವಿಧ ಘಾಟ್‌ಗಳತ್ತ ಸಂಚರಿಸುತ್ತಿದ್ದುದು ಕಂಡುಬಂತು. ಪ್ರಯಾಗ್‌ರಾಜ್ ಕಡೆಯಿಂದ ಬರುತ್ತಿದ್ದ ಭಕ್ತರು ಕಚ್ಛಪ ದ್ವಾರ ಮೂಲಕ ಸಂಗಮ ಪ್ರದೇಶ ಪ್ರವೇಶಿಸಿದರು.
ಲಖನೌ: ಕಾಲ್ತುಳಿತ ಕುರಿತು ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಮೂವರು ಸದಸ್ಯರ ನ್ಯಾಯಾಂಗ ಆಯೋಗವು ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಲಿದೆ. ‘ಮಹಾ ಕುಂಭದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಕಾರಣ ಪತ್ತೆಗೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಲು ಆಯೋಗಕ್ಕೆ ಒಂದು ತಿಂಗಳು ಅವಕಾಶ ನೀಡಲಾಗಿದೆ. ಆದರೆ ಆದಷ್ಟು ತ್ವರಿತವಾಗಿ ತನಿಖೆ ಪೂರ್ಣಗೊಳಿಸಲು ಯತ್ನಿಸಲಾಗುವುದು’ ಎಂದು ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಹರ್ಷಕುಮಾರ್ ಹೇಳಿದ್ದಾರೆ. ನಿವೃತ್ತ ಡಿಜಿಪಿ ವಿ.ಕೆ.ಗುಪ್ತಾ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಿ.ಕೆ.ಸಿಂಗ್ ಅವರು ಆಯೋಗದ ಸದಸ್ಯರಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಷಕುಮಾರ್ ‘ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಲ್ತುಳಿತಕ್ಕೆ ಕಾರಣವಾದ ಸಂಭವನೀಯ ಕಾರಣಗಳು ಹಾಗೂ ಸಂದರ್ಭಗಳ ವಿಶ್ಲೇಷಣೆ ಮಾಡಲಾಗುವುದು. ಎಲ್ಲ ಸಂಗತಿಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.