BJP
ನವದೆಹಲಿ: ಮಾಲೆಗಾಂವ್ ಸ್ಫೋಟ ಪ್ರಕರಣದ ಏಳು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇದರೊಂದಿಗೆ ಹಿಂದೂ ಭಯೋತ್ಪಾದನೆ ಎಂಬ ಹೆಸರಿನಲ್ಲಿ ಹಿಂದೂಗಳ ವಿರುದ್ಧ ರೂಪಿಸಿದ್ದ ಸಂಚು ಬಯಲಾಗಿದೆ. ಒಬ್ಬ ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ. ಅಮಾಯಕ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟುವ ಮೂಲಕ ಸನಾತನ ಧರ್ಮವನ್ನು ನಿಂದಿಸಿದ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ಮತ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್, ಮುಗ್ಧ ಜನರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿತು. ಆದರೆ ಮಾಲೆಗಾಂವ್ ಸ್ಫೋಟ ಪ್ರಕರಣ (2008)ದ ತೀರ್ಪು ನೀಡುವಾಗ ನ್ಯಾಯಾಧೀಶರು ಹೀಗೆ ಹೇಳಿದ್ದಾರೆ.
ಬೈಕ್ ಮೇಲೆ ಸ್ಫೋಟಕವನ್ನು ಇಡಲಾಗಿದೆ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.
ಬೈಕ್ ಸಾಧ್ವಿ ಪ್ರಜ್ಞಾ ಅವರದ್ದೇ ಅಥವಾ ಅವರು ಅದರ ಮಾಲೀಕರಾಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಆರ್‌ಡಿಎಕ್ಸ್ ಬಳಕೆಯ ಆರೋಪವಿದೆ. ಆದರೆ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರ ಮನೆಯಲ್ಲಿ ಅದರ ಸಂಗ್ರಹ ಕಂಡುಬಂದಿಲ್ಲ ಎಂದಿದೆ.
ಹಾಗಾಗಿ ಇದು ಕಾಂಗ್ರೆಸ್ ಪಿತೂರಿ ಎಂಬುದು ಸ್ಪಷ್ಟ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹಿಂದೂಗಳಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಮಾಳವೀಯ ಹೇಳಿದ್ದಾರೆ.
2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ 7 ಆರೋಪಿಗಳನ್ನು ಖುಲಾಸೆಗೊಳಿಸಿ ಮುಂಬೈನ ವಿಶೇಷ ನ್ಯಾಯಾಲಯ ಆದೇಶಿಸಿದೆ.
2008ರ ಸೆಪ್ಟೆಂಬರ್ 29 ರಂದು ಮುಂಬೈನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಮಾಲೆಗಾಂವ್ ಪಟ್ಟಣದ ಮಸೀದಿಯ ಬಳಿ ಮೋಟಾರ್ ಸೈಕಲ್‌ಗೆ ಕಟ್ಟಲಾಗಿದ್ದ ಸ್ಫೋಟಕ ಸಾಧನ ಸ್ಫೋಟಗೊಂಡು ಆರು ಜನರು ಸಾವಿಗೀಡಾದರೆ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.