ಮಾಲೆಗಾಂವ್ ಬಾಂಬ್ ಸ್ಫೋಟ ಸಂಭವಿಸಿದ ಸ್ಥಳ
ರಾಯಿಟರ್ಸ್ ಸಂಗ್ರಹ ಚಿತ್ರ
ಮುಂಬೈ: ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಏಳು ಆರೋಪಿಗಳನ್ನು ಖುಲಾಸೆಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಂತ್ರಸ್ತರ ಕುಟುಂಬಸ್ಥರು ನಿರ್ಧರಿಸಿದ್ದಾರೆ.
‘ನಮ್ಮ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿಯೂ ನ್ಯಾಯ ಸಿಗದಿದ್ದಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟುತ್ತೇವೆ’ ಎಂದು ಸಂತ್ರಸ್ತರ ಪರ ವಕೀಲ ಶಹೀದ್ ನದೀಮ್ ಗುರುವಾರ ಹೇಳಿದ್ದಾರೆ.
‘ಸಂದೇಹದ ಲಾಭ ನೀಡುವ ಮೂಲಕ ಎಲ್ಲ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಹೀಗಾಗಿ ಇದು ಪರಿಪೂರ್ಣವಾದ ಖುಲಾಸೆ ಆಗುವುದಿಲ್ಲ. ಶೀಘ್ರವೇ ಮೇಲ್ಮನವಿ ಸಲ್ಲಿಸಲಾಗುವುದು’ ಎಂದಿದ್ದಾರೆ.
ಮುಂಬೈ ರೈಲು ಸ್ಫೋಟ ಪ್ರಕರಣ ಉಲ್ಲೇಖಿಸಿದ ವಕೀಲ
ಮುಂಬೈನಲ್ಲಿ 2006ರ ಜುಲೈ 11ರಂದು ಸಂಭವಿಸಿದ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಂಘಟಿತ ಅಪರಾಧ ಕೃತ್ಯಗಳ ನಿಯಂತ್ರಣ ಕಾಯ್ದೆ (MCOCA) ವಿಶೇಷ ನ್ಯಾಯಾಲಯವು 12 ಮಂದಿಯನ್ನು ಅಪರಾಧಿಗಳು ಎಂದು ಘೋಷಿಸಿತ್ತು. ಅವರೆಲ್ಲರನ್ನೂ ಬಾಂಬೆ ಹೈಕೋರ್ಟ್ ಕಳೆದವಾರ ಪ್ರಕರಣದಿಂದ ಖುಲಾಸೆಗೊಳಿಸಿದ 24 ಗಂಟೆಗಳಲ್ಲೇ 'ಮಹಾ' ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ಉಲ್ಲೇಖಸಿರುವ ನದೀಮ್, 'ಮಾಲೆಗಾಂವ್ ಪ್ರಕರಣವನ್ನು ಉನ್ನತ ನ್ಯಾಯಾಲಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಅದೇ ವೇಗವನ್ನು ಕಾಯ್ದುಕೊಳ್ಳಬೇಕು' ಎಂದಿದ್ದಾರೆ.
'ಬಾಂಬ್ ಸ್ಫೋಟ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಆರೋಪಿಗಳ ಖುಲಾಸೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಸ್ವತಂತ್ರವಾಗಿ ಮೇಲ್ಮನವಿ ಸಲ್ಲಿಸುತ್ತೇವೆ. ಮಾಲೆಗಾಂವ್ ಸ್ಫೋಟದಲ್ಲಿ 6 ಮಂದಿ ಮೃತಪಟ್ಟು, 101 ಜನರು ಗಾಯಗೊಂಡಿದ್ದರು. ಬಲವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ವಿಚಾರವಾಗಿ ಮೇಲ್ಮನವಿ ಸಲ್ಲಿಸಲಾಗುವುದು. ಆರೋಪಿ ನಂ.10 (ಸುಧಾಕರ್ ಚತುರ್ವೇದಿ) ಯಾವುದೇ ಬಾಂಬ್ ಸ್ಫೋಟವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅದು ಸುಳ್ಳು' ಎಂದು ವಿವರಿಸಿದ್ದಾರೆ.
ಮುಂಬೈನಿಂದ ಸುಮಾರು 200 ಕಿ.ಮೀ ದೂರದ ಮಾಲೆಗಾಂವ್ ಪಟ್ಟಣದ ಮಸೀದಿಯ ಬಳಿ 17 ವರ್ಷಗಳ ಹಿಂದೆ (2008ರ ಸೆಪ್ಟೆಂಬರ್ 29 ರಂದು) ಸ್ಫೋಟ ಸಂಭವಿಸಿತ್ತು. ಪ್ರಾಸಿಕೂಷನ್ ಬಳಿ ವಿಶ್ವಾಸಾರ್ಹ, ಬಲವಾದ ಪುರಾವೆಗಳಿಲ್ಲ ಎಂಬುದಾಗಿ ನ್ಯಾಯಾಲಯವು ಏಳು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.