ADVERTISEMENT

ಮಾಲೆಗಾಂವ್ ಸ್ಫೋಟದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ವರ್ಗಾವಣೆ

ಪಿಟಿಐ
Published 6 ಏಪ್ರಿಲ್ 2025, 9:10 IST
Last Updated 6 ಏಪ್ರಿಲ್ 2025, 9:10 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ಮುಂಬೈ: 2008ರ ಮಾಲೆಗಾಂವ್ ಸ್ಫೋಟದ ವಿಚಾರಣೆ ನಡೆಸುತ್ತಿದ್ದ ಎನ್‌ಐಎ ವಿಶೇಷ ಕೋರ್ಟ್‌ನ ನ್ಯಾಯಮೂರ್ತಿ ಎ.ಕೆ. ಲಹೋಟಿಯವರನ್ನು ನಾಸಿಕ್‌ಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣ ಸಂಬಂಧ ತೀರ್ಪು ಕಾಯ್ದಿರಿಸುವುದಕ್ಕಿಂತ ಕೆಲವೇ ದಿನ ಮುನ್ನ ಈ ವರ್ಗಾವಣೆ ನಡೆದಿದೆ.

ಬಾಂಬೆ ಹೈಕೋರ್ಟ್‌ನ ರಿಜಿಸ್ಟರ್ ಜನರಲ್ ಲಹೋಟಿ ಸೇರಿ ಇತರ ನ್ಯಾಯಾಧೀಶರ ವರ್ಗಾವಣೆ ಆದೇಶ ಹೊರಡಿಸಿದ್ದು, ಬೇಸಿಗೆ ರಜೆ ಕಳೆದು ಕೋರ್ಟ್‌ಗಳು ಪುನಾರಂಭಗೊಳ್ಳುವ ಜೂನ್ 9ರಿಂದ ಇದು ಅನ್ವಯವಾಗಲಿದೆ.

ADVERTISEMENT

ವರ್ಗಾವಣೆಯಿಂದಾಗಿ ಮಾಲೆಗಾಂವ್ ಸ್ಫೋಟದ ಸಂತ್ರಸ್ತರಿಗೆ ನ್ಯಾಯದಾನ ವಿಳಂಬವಾಗುವ ಅತಂಕ ಎದುರಾಗಿದೆ. ಹೀಗಾಗಿ ಲಹೋಟಿ ಅವರ ಅವಧಿ ವಿಸ್ತರಿಸುವಂತೆ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಸಂತ್ರಸ್ತರು ನಿರ್ಧರಿಸಿದ್ದಾರೆ.

ಈ ಪ್ರಕರಣದಲ್ಲಿ ಕಳೆದ 17 ವರ್ಷಗಳಲ್ಲಿ ವರ್ಗಾವಣೆಯಾಗುತ್ತಿರುವ 5ನೇ ನ್ಯಾಯಾಧೀಶರು ಲಹೋಟಿ.

ವಿಚಾರಣೆ ಮುಗಿದಿರುವ ಪ್ರಕರಣಗಳ ತೀರ್ಪು ನೀಡಬೇಕು ಹಾಗೂ ಅಧಿಕಾರ ಹಸ್ತಾಂತರಿಸುವಾಗ ಎಲ್ಲಾ ಪ್ರಕರಣಗಳ ವಿಲೇವಾರಿ ಮಾಡಬೇಕು ಎಂದು ವರ್ಗಾವಣೆ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣ ಸಂಬಂಧ ಶನಿವಾರ ನಡೆದ ವಿಚಾರಣೆಯಲ್ಲಿ, ಎಲ್ಲಾ ವಾದಗಳನ್ನು ಏಪ್ರಿಲ್ 15ರೊಳಗೆ ಮುಗಿಸಬೇಕು ಎಂದು ನ್ಯಾ. ಲಹೋಟಿಯವರು ಪ್ರಾಸಿಕ್ಯೂಷನ್‌ಗೆ ಸೂಚಿಸಿದ್ದರು. ಅದೇ ದಿನ ತೀರ್ಪು ಕಾಯ್ದಿರಿಸುವ ಸಾಧ್ಯತೆಯೂ ಇತ್ತು ಎಂದು ಸಂತ್ರಸ್ತರ ಪರ ವಕೀಲರು ಹೇಳಿದ್ದಾರೆ.

ನಾವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ವಿಚಾರಣೆ ಮುಗಿಯುವವರೆಗೆ ನ್ಯಾಯಾಧೀಶರ ಅವಧಿ ವಿಸ್ತರಿಸಬೇಕು ಎಂದು ಈ ಹಿಂದೆಯೂ ನಾವು ಕೋರ್ಟ್‌ಗೆ ಮನವಿ ಮಾಡಿದ್ದೆವು. ಈಗಾಗಲೇ ನ್ಯಾಯ ವಿಳಂಬವಾಗಿದ್ದು, ನ್ಯಾಯಮೂರ್ತಿಗಳ ವರ್ಗಾವಣೆಯಿಂದಾಗಿ ಇದು ಇನ್ನಷ್ಟು ಲಂಬಿಸಲಿದೆ. ನ್ಯಾಯದ ಹಿತದೃಷ್ಟಿಯಿಂದ, ಹಿರಿಯ ವಕೀಲರೊಂದಿಗೆ ಸಮಾಲೋಚಿಸಿದ ನಂತರ ನಾವು ನಿರ್ಧರಿಸುತ್ತೇವೆ.
– ಶಹೀದ್ ನದೀಮ್, ಮಾಲೆಗಾಂವ್ ಸಂತ್ರಸ್ತರ ಪರ ವಕೀಲ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿರುವ ಮಸೀದಿ ಸಮೀಪ ಬೈಕ್‌ನಲ್ಲಿ ಇರಿಸಲಾಗಿದ್ದ ಸಾಧನ ಸ್ಫೋಟಿಸಿ 6 ಮಂದಿ ಮೃತಪಟ್ಟಿದ್ದರು.100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 2008ರ ಸೆಪ್ಟೆಂಬರ್ 29ರಂದು ಮುಂಬೈನಿಂದ 100 ಕಿ.ಮೀ ದೂರದಲ್ಲಿ ಈ ಕೃತ್ಯ ನಡೆದಿತ್ತು.

ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಹಾಗೂ ಇನ್ನಿತರ ಐವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳ ಮೇಲೆ ಯುಎಪಿಎ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ದೂರು ದಾಖಲಾಗಿತ್ತು.

ಈವರೆಗೆ ಪ್ರಾಸಿಕ್ಯೂಷನ್‌ 323 ಹಾಗೂ ಸಂತ್ರಸ್ತರ ಪರ ವಕೀಲರು 8 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದಾರೆ.

ಮಹಾರಾಷ್ಟ್ರದ ಉಗ್ರ ನಿಗ್ರಹ ದಳ ಆರಂಭದಲ್ಲಿ ವಿಚಾರಣೆ ನಡೆಸಿತ್ತು. ಬಳಿಕ 2011ರಲ್ಲಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.