ADVERTISEMENT

Malegaon Blast: ಮಹಾರಾಷ್ಟ್ರದಲ್ಲೀಗ ರಾಜಕೀಯ ಜಟಾಪಟಿ

ಪಿಟಿಐ
Published 31 ಜುಲೈ 2025, 19:04 IST
Last Updated 31 ಜುಲೈ 2025, 19:04 IST
<div class="paragraphs"><p>ಮಾಲೆಗಾಂವ್ ಬಾಂಬ್‌ ಸ್ಫೋಟ ಸಂಭವಿಸಿದ ಸ್ಥಳ </p></div>

ಮಾಲೆಗಾಂವ್ ಬಾಂಬ್‌ ಸ್ಫೋಟ ಸಂಭವಿಸಿದ ಸ್ಥಳ

   

ರಾಯಿಟರ್ಸ್‌ ಸಂಗ್ರಹ ಚಿತ್ರ

ಮುಂಬೈ: ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ರಾಜಕೀಯ ಜಟಾಪಟಿ ಆರಂಭಗೊಂಡಿದೆ.

ADVERTISEMENT

‘ಆಗಿನ ಯುಪಿಎ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ ಪಕ್ಷವು ಇಸ್ಲಾಮಿಕ್‌ ಭಯೋತ್ಪಾದನೆಗೆ ಪ್ರತಿಯಾಗಿ ಹಿಂದೂ ಭಯೋತ್ಪಾದನೆ ಎಂಬ ಪದ ಸೃಷ್ಟಿಸಿತ್ತು’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.

ನ್ಯಾಯಾಲಯದ ಆದೇಶ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಹಾಗೂ ಎನ್‌ಸಿಪಿ (ಆಗ ಇಬ್ಭಾಗವಾಗಿರಲಿಲ್ಲ) ಪಕ್ಷಗಳು, ‘ಭಯೋತ್ಪಾದನೆಗೆ ಯಾವುದೇ ಧರ್ಮ. ಈ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಸೂಕ್ತ ಸಾಕ್ಷ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ’ ಎಂದಿವೆ.

ಈ ಬಾಂಬ್‌ ಸ್ಫೋಟ ಸಂಭವಿಸಿದ್ದ ಸಂದರ್ಭದಲ್ಲಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮೈತ್ರಿಕೂಟ ‘ಡೆಮಾಕ್ರಟಿಕ್‌ ಫ್ರಂಟ್‌’ ನೇತೃತ್ವದ ಸರ್ಕಾರವಿತ್ತು.

‘ಕೇಸರಿ ಭಯೋತ್ಪಾದನೆ ಎಂಬುದು ಇರಲಿಲ್ಲ. ಮುಂದೆಯೂ ಇರುವುದಿಲ್ಲ. ವೋಟ್‌ಬ್ಯಾಂಕ್‌ ರಾಜಕಾರಣ ಹಾಗೂ ಮುಸ್ಲಿಂ ಮತಗಳಿಗಾಗಿ ಕಾಂಗ್ರೆಸ್‌ ಪಕ್ಷ ಓಲೈಕೆ ರಾಜಕಾರಣ ಮಾಡುತ್ತಿದೆ. ಇದೇ ಕಾರಣಕ್ಕೆ ಅದು ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಸೃಷ್ಟಿ ಮಾಡಿತು. ಈಗ, ಕಾಂಗ್ರೆಸ್‌ ಪಕ್ಷ ಹಿಂದೂ ಸಮುದಾಯದ ಕ್ಷಮೆ ಕೇಳಬೇಕು’ ಎಂದು ಫಡಣವೀಸ್‌ ಆಗ್ರಹಿಸಿದ್ದಾರೆ.

ಹಿಂದೂಗಳ ಮೇಲೆ ಅನ್ಯಾಯವಾಗಿ ಹೊರಿಸಲಾಗಿದ್ದ ಕಳಂಕವನ್ನು ಎನ್‌ಐಎ ನ್ಯಾಯಾಲಯದ ಈ ತೀರ್ಪು ಅಳಿಸಿ ಹಾಕಿದೆ. ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಮುಖವಾಡವೂ ಕಳಚಿದೆ ಎಂದು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

‘ಮುಂಬೈ ಉಪನಗರ ರೈಲುಗಳಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆ ಮಾಡಿ ಬಾಂಬೆ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಈ ಪ್ರಕರಣ ದಲ್ಲಿಯೂ ರಾಜ್ಯ ಸರ್ಕಾರ ಇಂಥದೇ ಕ್ರಮ ಕೈಗೊಳ್ಳುವುದೇ’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

‘ಕೇಂದ್ರದಲ್ಲಿ ಸರ್ಕಾರ ಬದಲಾದ ನಂತರ, ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳ ಕುರಿತು ಮೃದು ಧೋರಣೆ ತಳೆಯುವಂತೆ ಎನ್‌ಐಎ ಹೇಳಿತ್ತು ಎಂಬುದಾಗಿ ವಿಶೇಷ ಸರ್ಕಾರಿ ವಕೀಲೆ ರೋಹಿಣಿ ಸಾಲ್ಯಾನ್ ಹೇಳಿದ್ದರು. ಇಂದಿನ ತೀರ್ಪಿನಿಂದಾಗಿ ರೋಹಿಣಿ ಅವರ ಹೇಳಿಕೆಗೆ ಮಹತ್ವ ಬಂದಿದೆ’ ಎಂದು ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಹರ್ಷವರ್ಧನ ಸಪ್ಕಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.