ADVERTISEMENT

ಅಧಿಕಾರದಲ್ಲಿರಲು BJP ಅನೈತಿಕತೆಯ ಯಾವ ಮಟ್ಟಕ್ಕೂ ಇಳಿಯುತ್ತದೆ: ಖರ್ಗೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 11:41 IST
Last Updated 15 ಆಗಸ್ಟ್ 2025, 11:41 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

– ಪಿಟಿಐ ಚಿತ್ರ

ನವದೆಹಲಿ: ಅಧಿಕಾರದಲ್ಲಿ ಉಳಿಯಲು ಬಿಜೆಪಿಯು ಅತ್ಯಂತ ಅನೈತಿಕ ಹಾದಿ ಹಿಡಿದಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಆರೋಪಿಸಿದರು.

ADVERTISEMENT

‘ಚುನಾವಣೆಯ ಹಿಂದಿನ ದಿನ ಹೊಸ ಮತದಾರ ಪಟ್ಟಿಯನ್ನು ಬಿಡುಗಡೆ ಮಾಡುವ ‘ಹೊಸ ಟ್ರೆಂಡ್‌’ ಸೃಷ್ಟಿಯಾಗಿದೆ. ಆ ಸಂದರ್ಭದಲ್ಲಿ ಪರಿಶೀಲಿಸಲು ಅಭ್ಯರ್ಥಿಗೆ ಸಮಯವಿರುವುದಿಲ್ಲ. ಇದು ನಮ್ಮ ವಿರೋಧಿಗಳ ಪಿತೂರಿ. ಈ ಸಂಚನ್ನು ಬಯಲು ಮಾಡುತ್ತೇವೆ’ ಎಂದರು.

ಬಿಹಾರದಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರನ್ನು ಅಳಿಸಿಹಾಕಿದ್ದರೂ ಬಿಜೆಪಿಯು ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ನಡೆಯು ಆಶ್ಚರ್ಯ ಮೂಡಿಸುವಂತಿದೆ ಮತ್ತು ಇದರಿಂದಲೇ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖ್ಯ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರ ಅವರು, ‘ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲಕ ವಿರೋಧ ಪಕ್ಷಗಳ ಬೆಂಬಲಿಗರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದೂ ಸೇರಿದಂತೆ ದೊಡ್ಡ ಮಟ್ಟದಲ್ಲಿ ಚುನಾವಣಾ ಅಕ್ರಮ ಎಸಗಲಾಗುತ್ತಿದೆ. ಚುನಾವಣಾ ಆಯೋಗದ ಪಕ್ಷಪಾತವನ್ನು ವಾಸ್ತವಾಂಶಗಳ ಮೂಲಕ ಬಯಲಿಗೆ ತರಬಹುದು. ಆದರೆ ಯಾರನ್ನು, ಯಾವ ಕಾರಣಕ್ಕಾಗಿ ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಬಹಿರಂಗಪಡಿಸಲು ಅದು ಸಿದ್ಧವಿಲ್ಲ. ಬಿಹಾರದಲ್ಲಿ ಜೀವಂತ ಇರುವವರನ್ನೂ ಮೃತಪಟ್ಟಿದ್ದಾರೆ ಎಂದು ದಾಖಲಿಸಲಾಗಿದೆ’ ಎಂದು ಹೇಳಿದರು.

‘ಜನರ ಧ್ವನಿಯನ್ನು ಸುಪ್ರೀಂ ಕೋರ್ಟ್‌ ಆಲಿಸಿ, ಪಟ್ಟಿಯಿಂದ ಕೈಬಿಟ್ಟವರ ವಿವರ ನೀಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಅದಕ್ಕಾಗಿ ಧನ್ಯವಾದ ತಿಳಿಸುತ್ತೇನೆ’ ಎಂದರು.

‘ಬೂತ್‌ ಮಟ್ಟದಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ. ಎಷ್ಟು ಮಂದಿಯ ಹೆಸರನ್ನು ಅಳಿಸಿಹಾಕಲಾಗಿದೆ, ಎಷ್ಟು ಮಂದಿಯನ್ನು ಉದ್ದೇಶಪೂರ್ವಕವಾಗಿ ಮತ್ತೊಂದು ಬೂತ್‌ಗೆ ಸ್ಥಳಾಂತರಿಸಲಾಗಿದೆ, ಎಷ್ಟು ಮಂದಿ ಹೊರಗಿನವರ ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂದು ಪರಿಶೀಲಿಸಿ’ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಇದು ಚುನಾವಣೆ ಗೆಲ್ಲಲು ನಡೆಸುವ ಹೋರಾಟ ಅಲ್ಲ; ಭಾರತೀಯ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸುವ ಹೋರಾಟ ಎಂಬುದು ನೆನಪಿರಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.