ಸಿಲಿಗುರಿ: ಪಶ್ಚಿಮ ಬಂಗಾಳದಲ್ಲಿನ ಅಭಿವೃದ್ಧಿಗೆ ಇಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡೆಯೊಡ್ಡುತ್ತಿದ್ದಾರೆ.ಅವರು ಸ್ಪೀಡ್ ಬ್ರೇಕರ್ ದೀದಿ.ಈ ರೀತಿ ಅಭಿವೃದ್ಧಿಗೆ ಅಡಚಣೆಯನ್ನುಂಟು ಮಾಡುವ ಅವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಕರೆ ನೀಡಿದ್ದಾರೆ.
ಬುಧವಾರ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಇನ್ನಿತರ ರಾಜ್ಯಗಳಲ್ಲಿ ನಾನು ಅಭಿವೃದ್ಧಿ ಕಾರ್ಯ ಮಾಡಿದಂತೆ ಪಶ್ಚಿಮ ಬಂಗಾಳದಲ್ಲಿಯೂ ನಾನು ಅಭಿವೃದ್ದಿ ಕಾರ್ಯಗಳನ್ನು ಮಾಡಬಲ್ಲೆ.ಆದರೆ ಇಲ್ಲಿ ಸ್ಪೀಡ್ ಬ್ರೇಕರ್ ಇದೆ, ಅವರೇ ದೀದಿ ಎಂದಿದ್ದಾರೆ.
2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದಾಗ್ಯೂ 2019ರ ಈ ಲೋಕಸಭಾ ಚುನಾವಣೆಯು ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರವನ್ನು ಕೊನೆಗೊಳಿಸಲಿರುವ ಆರಂಭಿಕ ಕ್ರಿಯೆ ಆಗಲಿದೆ.
ದೀದಿ ಬಡವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬಡತನ ನಿರ್ಮೂಲನೆ ಆದರೆ ಆಕೆಯ ರಾಜಕೀಯ ನಿಂತು ಹೋಗುತ್ತದೆ.ಇದೇ ಸ್ಥಿತಿ ಸಿಪಿಐ(ಎಂ)ನದ್ದು. ತೃಣಮೂಲ ಕಾಂಗ್ರೆಸ್ ನಾಯಕರು ಪೋಂಜಿ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಯೋಜನೆಗಳಿಗಾಗಿ ಹೂಡಿದ್ದ ಹಣವನ್ನು ಕದ್ದು ಈ ನಾಯಕರು ಪರಾರಿಯಾಗಿದ್ದರು. ಟಿಎಂಸಿಯಿಂದ ಸಂಬಳ ಪಡೆದು ಭಯೋತ್ಪಾದನೆ ಸೃಷ್ಟಿಸುವವರಿದ್ದಾರೆ. ಶೀಘ್ರವೇಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.