ADVERTISEMENT

ಮಮತಾ ವಿನಾಶಕಾರಿ, ಹಗೆ ಸಾಧಿಸುವವರು: ಐಪಿಎಸ್‌ ಅಧಿಕಾರಿ ಆತ್ಮಹತ್ಯೆ ಪತ್ರ ಬಹಿರಂಗ

ಏಜೆನ್ಸೀಸ್
Published 23 ಫೆಬ್ರುವರಿ 2019, 3:08 IST
Last Updated 23 ಫೆಬ್ರುವರಿ 2019, 3:08 IST
   

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನಾಶಕಾರಿ ಮತ್ತು ಹಗೆ ಸಾಧಿಸುವ ಮನೋಭಾವದವರು. ನನ್ನ ಆತ್ಮಹತ್ಯೆಗೆ ಅವರೇ ಕಾರಣಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಆತ್ಮಹತ್ಯಾ ಪತ್ರ ಬರೆದಿದ್ದಾರೆ.

ಗೌರವ್ ದತ್‌ ಅವರು 1986ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ಪುರುಷ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 2010ರಲ್ಲಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು ಮತ್ತು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.

ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ದತ್‌, ‘ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿಯೇ ಕಾರಣ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ಹತ್ತು ವರ್ಷಗಳವರೆಗೆ ನನ್ನನ್ನು ಗೋಳಾಡಿಸಿದರು

‘ನನ್ನ ಮೇಲಿನ ದ್ವೇಷದಿಂದ ಹಾಕಲಾಗಿದ್ದ ಎರಡು ಪ್ರಕರಣಗಳನ್ನು ತೆರವುಗೊಳಿಸಲು ಎಷ್ಟು ಬಾರಿ ಕೇಳಿದರೂ ಮುಖ್ಯಮಂತ್ರಿ ಅದನ್ನುನಿರಾಕಿಸಿದರು. 10 ವರ್ಷಗಳ ವರೆಗೆ ನನ್ನ ಮೇಲೆ ಹಗೆ ಸಾಧಿಸಿದರು’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ನನ್ನ ಮೇಲಿದ್ದ ಒಂದು ಪ್ರಕರಣದ ಕಡತವನ್ನು ಉದ್ದೇಶಪೂರ್ವಕವಾಗಿಯೇ ಅವರು ಕಳೆದು ಹಾಕಿದ್ದರು. ಇನ್ನು ಎರಡನೇ ಪ್ರಕರಣದಲ್ಲಿ ಭ್ರಷ್ಟಾಚಾರಆರೋಪವನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯ ಬಳಿಪೊಲೀಸ್‌ ಮಹಾನಿರ್ದೇಶಕರೂ ವಿನಂತಿಸಿದ್ದರು. ಆದರೆ, ಪ್ರಯೋಜನವಾಗಲಿಲ್ಲ’ ಎಂದಿದ್ದಾರೆ.

‘ಆತ್ಮಹತ್ಯೆಯ ನಂತರವಾದರೂ ನನ್ನ ಮೇಲಿನ ಪ್ರಕರಣಗಳನ್ನು ಕೈಬಿಟ್ಟು, ನನ್ನ ಉಳಿತಾಯದ ಹಣವನ್ನು ಕುಟುಂಬದವರಿಗೆ ನೀಡಿದರೆ, ಅವರಾದರೂ ಗೌರವಯುತವಾಗಿ ಬದುಕುತ್ತಾರೆ. ನನ್ನ ಮೇಲಿನ ದ್ವೇಷದಿಂದ, ನನಗೆ ಪಾಠ ಕಲಿಸಬೇಕೆನ್ನುವ ಒಂದೇ ಉದ್ದೇಶದಿಂದ ನಿವೃತ್ತಿಯ ನಂತರವೂ ನನ್ನ ಉಳಿತಾಯದ ಹಣವನ್ನು ನೀಡಲಿಲ್ಲ’ ಎಂದು ಹೇಳಿದ್ದಾರೆ.

‘ಮಮತಾ ಅವರ ಈ ರೀತಿಯ ಸೇಡಿನ ಮನೋಭಾವದಿಂದ ರಾಜ್ಯದಲ್ಲಿ ಯಾರೊಬ್ಬರು ಧೈರ್ಯದಿಂದ ಮಾತನಾಡುವುದಿಲ್ಲ. ಎಲ್ಲರೂ ಇಲ್ಲಿ ಬಂಧಿಗಳಾಗಿದ್ದಾರೆ. ಇಲ್ಲೊಂದು ರೀತಿ ಕಾಫ್ಕ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಲ್ಲೊಂದುವಿಷಪೂರಿತ ನರಕವನ್ನೇಸೃಷ್ಟಿಸಿದ್ದಾರೆ. ಇದು ಎಂದೂ ಮುಗಿಯುವುದಿಲ್ಲಎನ್ನಿಸುತ್ತದೆ’ ಎಂದು ಬೇಸರದಿಂದ ನುಡಿದಿದ್ದಾರೆ.

‘ನನ್ನ ಈ ಪತ್ರ ಪ್ರಮಾಣಿಕ ಅಧಿಕಾರಿಗಳ ಸಮಸ್ಯೆಗಳ ಬಗ್ಗೆ ಬೆಳಕಚೆಲ್ಲಲಿದೆ. ಇನ್ನು ಮುಂದಾದರೂ ಪ್ರಾಮಾಣಿಕ ಅಧಿಕಾರಿಗಳಿಗೆ ಹಿಂಸೆ ನೀಡುವ ಮುನ್ನ ಸರ್ಕಾರ ಎರಡು ಬಾರಿ ಯೋಚಿಸಲಿದೆ ಎಂದು ಭಾವಿಸುತ್ತೇನೆ. ಗೌರವದಿಂದ ಬದುಕಲು ಸಾಧ್ಯವಾಗದಿದ್ದರೆ, ಸಾಯುವುದೇ ಉತ್ತಮ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.