
ಕೋಲ್ಕತ್ತ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್‌ಐಆರ್)ಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಮಮತಾ,‘ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯಕ್ಕೆ ಶಾಶ್ವತ ಹಾನಿ ಉಂಟು ಮಾಡಲಿದೆ ಹಾಗೂ ಮತ ಚಲಾಯಿಸುವ ಹಕ್ಕಿನಿಂದ ಜನರು ವಂಚಿತರಾಗುವಂತೆ ಮಾಡಲಿದೆ’ ಎಂದು ವಿವರಿಸಿದ್ದಾರೆ.
‘ಎಸ್‌ಐಆರ್ ನಡೆಸುವ ವೇಳೆ ಹಲವು ಅಕ್ರಮಗಳು ನಡೆಯುತ್ತಿವೆ, ನಿಯಮಗಳ ಉಲ್ಲಂಘನೆಯಾಗುತ್ತಿದೆ’ ಎಂದು ಆರೋಪಿಸಿರುವ ಅವರು, ‘ಇಡೀ ಪ್ರಕ್ರಿಯೆಯನ್ನು ಯಾವುದೇ ಪೂರ್ವತಯಾರಿ ಇಲ್ಲದೆಯೇ ಕೈಗೊಳ್ಳಲಾಗಿದೆ’ ಎಂದು ಡಿಸೆಂಬರ್ 3ರಂದು ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
‘ಅವಸರದಿಂದ ಹಾಗೂ ಸೂಕ್ತ ತಯಾರಿ ಇಲ್ಲದೆಯೇ ಎಸ್‌ಐಆರ್ ಕೈಗೊಳ್ಳಲಾಗಿದೆ. ಕಂಪ್ಯೂಟರ್, ತಂತ್ರಾಂಶ ಸೇರಿ ಅಗತ್ಯ ಮೂಲಸೌಕರ್ಯಗಳ ಕೊರತೆ ಇದೆ. ಸಿಬ್ಬಂದಿಗೆ ಸಮರ್ಪಕ ತರಬೇತಿಯನ್ನೂ ನೀಡಲಾಗಿಲ್ಲ’ ಎಂದು ಆರೋಪಿಸಿದ್ದಾರೆ.
ಅಹವಾಲು ಸಲ್ಲಿಕೆ ಬಳಿಕ ವೃದ್ಧ ಸಾವು: ರಾಜಕೀಯ ಜಟಾಪಟಿ
ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದ್ದ 68 ವರ್ಷದ ವ್ಯಕ್ತಿ ಎಸ್‌ಐಆರ್ ಭಾಗವಾಗಿ ನಡೆದ ಅಹವಾಲು ಆಲಿಕೆ ಸಭೆಗೆ ಹಾಜರಾದ ಕೆಲ ದಿನಗಳ ಬಳಿಕ ಮೃತಪಟ್ಟಿರುವುದು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. 24 ದಕ್ಷಿಣ ಪರಗಣ ಜಿಲ್ಲೆಯ ಉತ್ತರ ಠಾಕೂರೆಚಕ್ ಪ್ರದೇಶದ ನಜಿತ್ ಉಲ್ ಮೊಲ್ಲಾ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
‘ಉಸಿರಾಟದ ತೊಂದರೆಯಿಂದಾಗಿ ನಜಿತ್ ಉಲ್ ಮೊಲ್ಲಾ ಅವರನ್ನು ಡಿ.20ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಸ್‌ಐಆರ್‌ಗೆ ಸಂಬಂಧಿಸಿ ಖುದ್ದು ಹಾಜರಾಗಿ ಮಾಹಿತಿ ಒದಗಿಸುವಂತೆ ಇತ್ತೀಚೆಗೆ ಅವರಿಗೆ ನೋಟಿಸ್ ನೀಡಲಾಗಿತ್ತು’ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ‘ಡಿ.28ರಂದು ಅವರನ್ನು ಮನೆಗೆ ಕಳುಹಿಸಲಾಯಿತು. ಮೂಗಿನ ಮೂಲಕ ಅಳವಡಿಸಿದ್ದ ಕ್ಯಾನುಲಾವನ್ನು ತೆಗೆದಿರಲಿಲ್ಲ. ಅದೇ ಸ್ಥಿತಿಯಲ್ಲಿ ಅವರು ಡಿ.31ರಂದು ಎಸ್‌ಐಆರ್ ನಡೆಸುತ್ತಿದ್ದ ಸಿಬ್ಬಂದಿ ಮುಂದೆ ಹಾಜರಾಗಿದ್ದರು’ ಎಂದು ತಿಳಿಸಿದ್ದಾರೆ. ‘ಮನೆಗೆ ಮರಳಿದ ಬಳಿಕ ಅವರ ಆರೋಗ್ಯ ಹದಗೆಟ್ಟ ಕಾರಣ ಜನವರಿ 2ರಂದು ಪುನಃ ಆಸ್ಪತ್ರೆಗೆ ದಾಖಲಿಸಲಾಯಿತು.
ಶನಿವಾರ ರಾತ್ರಿ ಅವರು ಮೃತಪಟ್ಟರು’ ಎಂದೂ ತಿಳಿಸಿದ್ದಾರೆ. ಆರೋಪ–ಪ್ರತ್ಯಾರೋಪ: ಈ ವಿಚಾರ ಮುಂದಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ ನಡೆಸಿದೆ. ‘ಎಸ್‌ಐಆರ್‌ನಿಂದಾಗಿ ಮತದಾರರಲ್ಲಿ ಆತಂಕ ಒತ್ತಡ ಅಥವಾ ಆತ್ಮಹತ್ಯಾ ಯೋಚನೆಗಳು ಕಂಡುಬರುತ್ತಿವೆ. ಇಂತಹ ಮಾನಸಿಕ ಸಮಸ್ಯೆಯಿಂದಾಗಿ ಈವರೆಗೆ ರಾಜ್ಯದಲ್ಲಿ 56 ಜನರು ಮೃತಪಟ್ಟಿದ್ಧಾರೆ’ ಎಂದು ಟಿಎಂಸಿ ಟೀಕಿಸಿದೆ. ‘ಇವು ರಾಜಕೀಯ ಪ್ರೇರಿತ ಆರೋಪಗಳು’ ಎಂದು ಬಿಜೆಪಿ ತಿರುಗೇಟು ನೀಡಿದೆ.
‘ಮತದಾರರ ಪಟ್ಟಿಯ ಪರಿಷ್ಕರಣೆ ದೇಶದಾದ್ಯಂತ ನಡೆಯುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ಸಾವುಗಳನ್ನು ಟಿಎಂಸಿ ತನ್ನ ರಾಜಕೀಯ ಲಾಭಕ್ಕೆ ಹಾಗೂ ಬಿಜೆಪಿ ಹೆಸರಿಗೆ ಮಸಿ ಬಳಿಯಲು ಬಳಸಿಕೊಳ್ಳುತ್ತಿದೆ’ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.