ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ಉತ್ತರದತ್ತ ಮಮತಾ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 19:31 IST
Last Updated 17 ಫೆಬ್ರುವರಿ 2021, 19:31 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ ಭಾಗದ ಮೇಲೆ ಹಿಡಿತ ಸಾಧಿಸಲು ಅಲ್ಲಿನ ಬಹುಸಂಖ್ಯಾತ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಮುದಾಯವನ್ನು ಓಲೈಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಭಾಗದ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿಯು ಟಿಎಂಸಿ ಪಕ್ಷಕ್ಕೆ ಭಾರಿ ಪೆಟ್ಟು ನೀಡಿತ್ತು.

ಈ ಪ್ರದೇಶವು ಕೂಚ್ ಬಿಹಾರ್, ಅಲಿಪುರ್‌ದೌರ್, ಮಾಲ್ಡಾ, ದಕ್ಷಿಣ ದಿನಾಜ್‌ಪುರ, ಉತ್ತರ ದಿನಾಜ್‌ಪುರ, ಜಲಪೈಗುರಿ, ಕಾಲಿಂಪಾಂಗ್ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳನ್ನು ಒಳಗೊಂಡಿದೆ. ಬಂಗಾಳದ 294 ವಿಧಾನಸಭಾ ಸ್ಥಾನಗಳಲ್ಲಿ 54 ಕ್ಷೇತ್ರಗಳು ಈ ಜಿಲ್ಲೆಗಳಲ್ಲಿವೆ.

ರಾಜ್ಯದ ಅತಿದೊಡ್ಡ ಪರಿಶಿಷ್ಟ ಜಾತಿ ಗುಂಪು ಎನಿಸಿರುವ ರಾಜಬಂಶಿ ಸಮುದಾಯವು ಬಿಜೆಪಿಯನ್ನು ಬೆಂಬಲಿಸುತ್ತಿದೆ. ಈ ಸಮುದಾಯವನ್ನು ಸೆಳೆಯುವ ಮೂಲಕ ಬಿಜೆಪಿ ಬಲ ಕುಂದಿಸಲು ಮಮತಾ ಪ್ರಯತ್ನಿಸುತ್ತಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. ಉತ್ತರ ಬಂಗಾಳದ ಸುಮಾರು 20 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಈ ಸಮುದಾಯ ನಿರ್ಣಾಯಕವಾಗಿದೆ.

ADVERTISEMENT

ರಾಜಬಂಶಿ ಸಮುದಾಯದ ಬೆಂಬಲವನ್ನು ಮರಳಿ ಪಡೆಯಲು ಆ ಸಮುದಾಯಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಡಲು ಮಮತಾ ಮುಂದಾಗಿದ್ದಾರೆ. ಅವರು ಈಗಾಗಲೇ ಎರಡು ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಿದ್ದಾರೆ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಅಲಿಪುರ್‌ದೌರ್ ಜಿಲ್ಲೆಯ ಬುಡಕಟ್ಟು ಜನಾಂಗದವರು ಮತ್ತು ಬಂದ್ ಆಗಿರುವ ಚಹಾ ತೋಟಗಳ ಕಾರ್ಮಿಕರ ವಿಷಯದ ಮೇಲೆ ಗಮನ ಹರಿಸಲು ಮಮತಾ ಉದ್ದೇಶಿಸಿದ್ದಾರೆ ಎಂದು ಪಕ್ಷದ ಒಳಗಿನ ವ್ಯಕ್ತಿಗಳು ಹೇಳಿದ್ದಾರೆ. ಮುಚ್ಚಿರುವ ಚಹಾ ತೋಟಗಳನ್ನು ತೆರೆದು ಕಾರ್ಮಿಕರಿಗೆ ಕೆಲಸ ಕೊಡುವುದಾಗಿ ನೀಡಿದ್ದ ಭರವಸೆಯನ್ನು ಬಿಜೆಪಿ ಈಡೇರಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಕಾರ್ಮಿಕರಿಗೆ ಮನವರಿಕೆ ಮಾಡಿಕೊಡಲು ಅವರು ನಿರ್ಧರಿಸಿದ್ದಾರೆ.

ಮುಸ್ಲಿಂ ಪ್ರಾಬಲ್ಯದ ಮಾಲ್ಡಾ ಜಿಲ್ಲೆಯಲ್ಲಿ ಟಿಎಂಸಿ ತಂತ್ರಗಾರಿಕೆ ಮತ್ತೊಂದು ರೀತಿಯದ್ದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಗಿದ್ದ ಅಲ್ಪಸಂಖ್ಯಾತ ಮತಗಳ ವಿಭಜನೆಯನ್ನು ತಡೆಯುವುದು ಮುಖ್ಯ ಉದ್ದೇಶ. ಜೊತೆಗೆ ಹಿಂದೂ ಮತಗಳನ್ನು ತನ್ನ ಪರವಾಗಿ ಕ್ರೋಡೀಕರಿಸಲು ಬಿಜೆಪಿಗೆ ಸಾಧ್ಯವಾಗದಂತೆ ನೋಡಿಕೊಳ್ಳುವುದು ಟಿಎಂಸಿ ಮುಂದಿರುವ ಗುರಿಯಾಗಿದೆ.

ಚಿತ್ರನಟ ಯಶ್‌ ದಾಸ್‌ಗುಪ್ತಾ ಅವರು ಕೋಲ್ಕತ್ತದಲ್ಲಿ ಬುಧವಾರ ಬಿಜೆಪಿಗೆ ಸೇರ್ಪಡೆಯಾದರು –ಪಿಟಿಐ ಚಿತ್ರ

ಶಾ, ಮೋದಿ, ಮಮತಾ ಸರಣಿ ಸಮಾವೇಶ
ವಿಧಾನಸಭಾ ಚುನಾವಣೆಯು ಬಂಗಾಳದಲ್ಲಿ ರಾಜಕೀಯ ಬಿಸಿ ಏರಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಸರಣಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ನಾಮ್ಖಾನಾದಲ್ಲಿ ಗುರುವಾರ ಶಾ ಅವರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ ನಿರಾಶ್ರಿತರ ಕುಟುಂಬವೊಂದರ ಜತೆ ಗೃಹ ಸಚಿವರು ಮಧ್ಯಾಹ್ನದ ಊಟ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಫೆಬ್ರವರಿ 22ರಂದು ಹೂಗ್ಲಿ ಜಿಲ್ಲೆಯ ಸಹಗಂಜ್‌ನಲ್ಲಿ ನಡೆಯುವ ರ‍್ಯಾಲಿಯಲ್ಲಿ ಪ್ರಧಾನಿ ಮಾತನಾಡಲಿದ್ದಾರೆ. ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಮಾತಿನ ಕದನ ನಡೆಯುವ ಸಾಧ್ಯತೆ ಇದೆ. ಪ್ರಧಾನಿ ಕಾರ್ಯಕ್ರಮ ನಡೆಸಿದ ಸ್ಥಳದಲ್ಲಿಯೇ ಅದರ ಮರುದಿನ ಮಮತಾ ರ‍್ಯಾಲಿಯಲ್ಲಿ ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.