ADVERTISEMENT

ಕೂ ಆ್ಯಪ್‌ನಲ್ಲಿ ಅಧಿಕೃತ ಖಾತೆ ತೆರೆದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ

ಪಿಟಿಐ
Published 5 ಸೆಪ್ಟೆಂಬರ್ 2021, 2:44 IST
Last Updated 5 ಸೆಪ್ಟೆಂಬರ್ 2021, 2:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಸಾಮಾಜಿಕ ಮಾಧ್ಯಮದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶನಿವಾರ ಮೈಕ್ರೋಬ್ಲಾಗಿಂಗ್ ತಾಣವಾದ ಕೂನಲ್ಲಿ ಅಧಿಕೃತ ಖಾತೆಯನ್ನು ತೆರೆದಿದೆ.

ಪಶ್ಚಿಮ ಬಂಗಾಳ ಮತ್ತು ತ್ರಿಪುರಾದ ಜನರೊಂದಿಗೆ ಮಾಹಿತಿ, ಪರಿಷ್ಕರಣೆ ಮತ್ತು ಹೊಸ ಬೆಳವಣಿಗೆಗಳನ್ನು ಹಂಚಿಕೊಳ್ಳಲು ಪಕ್ಷವು ಕೂ ವೇದಿಕೆಯನ್ನು ಬಳಸುತ್ತದೆ ಎಂದು ಹಿರಿಯ ಟಿಎಂಸಿ ಮುಖಂಡರು ತಿಳಿಸಿದ್ದಾರೆ.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಜೊತೆಗೆ, ಪಕ್ಷದ ತ್ರಿಪುರಾ ಘಟಕ ಮತ್ತು ಅದರ ವಿದ್ಯಾರ್ಥಿ ಘಟಕವು ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ತೆರೆದಿದೆ. ಬಂಗಾಳಿ ಮತ್ತು ಇಂಗ್ಲಿಷ್ ಎರಡರಲ್ಲೂ ಕೂ ಆ್ಯಪ್‌ನಲ್ಲಿ ಮೊದಲ ಪೋಸ್ಟ್ ಹಾಕಿರುವ ಟಿಎಂಸಿ, 'ನಾವು ಕೂನಲ್ಲಿ ಇರುವುದಕ್ಕೆ ಸಂತೋಷಪಡುತ್ತೇವೆ' ಎಂದು ಹೇಳಿದೆ.

ADVERTISEMENT

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಂಗಾಳಿ, ಹಿಂದಿ, ಇಂಗ್ಲಿಷ್ ಮತ್ತು ಇತರ ಭಾಷೆಗಳ ಜನರೊಂದಿಗೆ ತನ್ನ ಸಂಪರ್ಕವನ್ನು ವಿಸ್ತರಿಸುತ್ತದೆ ಎಂದು ಟಿಎಂಸಿ ನಾಯಕರು ತಿಳಿಸಿದ್ದಾರೆ.

ಕೂ ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಪಶ್ಚಿಮ ಬಂಗಾಳದ ಆಡಳಿತ ಪಕ್ಷವು ಕೂ ಆ್ಯಪ್‌ಗೆ ಬಂದಿರುವುದನ್ನು ಸ್ವಾಗತಿಸಿದ್ದಾರೆ. 'ಇದು ಪಕ್ಷದ ಬೆಳವಣಿಗೆಗಳು ಮತ್ತು ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಅನುವು ಮಾಡಿಕೊಡುತ್ತದೆ ಎಂದು ನಾವು ನಂಬುತ್ತೇವೆ'. ಅಲ್ಪಾವಧಿಯಲ್ಲಿ, ಕೂ ಆ್ಯಪನ್ನು 10 ಮಿಲಿಯನ್‌ಗೂ ಅಧಿಕ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಈ ಆ್ಯಪ್‌ ಎಂಟು ಭಾಷೆಗಳಲ್ಲಿ ಲಭ್ಯವಿದ್ದು, ಜನರು ತಮ್ಮ ಮಾತೃಭಾಷೆಯಲ್ಲಿ ಅನೇಕ ಬಳಕೆದಾರರೊಂದಿಗೆ ಸಂವಹನ ನಡೆಸಲು ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.

ಟಿಎಂಸಿ ಮತ್ತು ಅದರ ಹಲವಾರು ವಿಭಾಗಗಳು ಈಗಾಗಲೇ ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಖಾತೆಗಳನ್ನು ಹೊಂದಿದ್ದು, ಮಮತಾ ಬ್ಯಾನರ್ಜಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಸಂಸದರಾದ ಮಹುವ ಮೊಯಿತ್ರಾ, ಡೆರೆಕ್‌ ಒಬ್ರಿಯಾನ್‌ ಹೊರತುಪಡಿಸಿ ರಾಜ್ಯ ಸಚಿವರಾದ ಬ್ರಾತ್ಯ ಬಸು, ಪಾರ್ಥ ಚಟರ್ಜಿ, ವಕ್ತಾರ ಕುನಾಲ್ ಘೋಷ್ ಈ ಆನ್‌ಲೈನ್ ಸೈಟ್‌ಗಳಲ್ಲಿ ಸಕ್ರಿಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.