ADVERTISEMENT

ಕೇಂದ್ರ–ರಾಜ್ಯಗಳ ಮುಗಿಯದ ರಾಜಕೀಯ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 19:30 IST
Last Updated 9 ಫೆಬ್ರುವರಿ 2019, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಮತ್ತು ರಾಜ್ಯಗಳಲ್ಲಿ ಪ್ರತಿಸ್ಪರ್ಧಿ ಪಕ್ಷಗಳು ಅಧಿಕಾರದಲ್ಲಿದ್ದರೆ, ಸಂಘರ್ಷ ನಡೆಯುತ್ತದೆ ಎಂಬ ಮಾತುಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ.ಕೋಲ್ಕತ್ತ ಪೊಲೀಸ್ ಕಮಿಷನರ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಡುವಣ ಜಟಾಪಟಿಯು ಈ ಅಭಿಪ್ರಾಯವನ್ನು ಬಲಗೊಳಿಸಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದನಂತರ ಇಂತಹ ಹಲವು ಜಟಾಪಟಿಗಳು ನಡೆದಿವೆ. ಆದರೆ ಈ ಜಟಾಪಟಿಗಳೆಲ್ಲವೂ ಪ್ರತಿಸ್ಪರ್ಧಿ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲೇ ನಡೆದಿವೆ ಎಂಬುದು ಗಮನಾರ್ಹ.

ಕೋಲ್ಕತ್ತ ಪೊಲೀಸ್ ಕಮಿಷನರ್ ಅವರ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದಾಗ, ರಾಜ್ಯ ಪೊಲೀಸರು ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದರು. ಸಿಬಿಐ ನಡೆಯನ್ನು ಖಂಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದರು. ಪೊಲೀಸ್ ಅಧಿಕಾರಿಯ ವಿಚಾರಣೆ ವಿಚಾರವನ್ನು ಸುಪ್ರೀಂ ಕೋರ್ಟ್ ಬಗೆಹರಿಸಬೇಕಾಯಿತು.

ADVERTISEMENT

ಮಮತಾ ಬ್ಯಾನರ್ಜಿ ಧರಣಿ ನಡೆಸುವುದಕ್ಕೂ 9 ತಿಂಗಳ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ಇಂಥದ್ದೇ ಧರಣಿ ನಡೆಸಿದ್ದರು. ದೆಹಲಿಯ ಆಡಳಿತ ಅಧಿಕಾರಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಮತ್ತು ಚುನಾಯಿತ ಸರ್ಕಾರದ ನಡುವೆ ಮೂರು ವರ್ಷಗಳಿಂದಲೂ ಸಂಘರ್ಷ ನಡೆದಿತ್ತು. ಲೆಫ್ಟಿನೆಂಟ್ ಗವರ್ನರ್ ಆಗಿ ಅನಿಲ್ ಬೈಜಾಲ್ ನೇಮಕವಾದ ನಂತರ ಈ ಸಂಘರ್ಷ ತಾರಕಕ್ಕೆ ಏರಿತ್ತು.

‘ಕೆಲಸ ಮಾಡಲು ಚುನಾಯಿತ ಸರ್ಕಾರಕ್ಕೆ ಬೈಜಾಲ್ ಅವಕಾಶ ನೀಡುತ್ತಿಲ್ಲ’ ಎಂದು ಕೇಜ್ರಿವಾಲ್ ಆರೋಪಿಸಿ, ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲೇ 9 ದಿನ ಧರಣಿ ನಡೆಸಿದ್ದರು. ‘ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ಬೈಜಾಲ್ ಹೀಗೆ ಮಾಡುತ್ತಿದ್ದಾರೆ’ ಎಂದೂ ಕೇಜ್ರಿವಾಲ್ ಆರೋಪಿಸಿದ್ದರು. ಅಂತಿಮವಾಗಿ ಇಬ್ಬರ ಅಧಿಕಾರ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.

ಹಿಂದೊಮ್ಮೆ ಎನ್‌ಡಿಎ ಮಿತ್ರಪಕ್ಷವಾಗಿದ್ದು, ಈಗ ಮೈತ್ರಿಕೂಟದಿಂದ ಹೊರಬಂದಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸಹ ಕೇಂದ್ರ ಸರ್ಕಾರದೊಂದಿಗೆ ಜಿದ್ದಿಗೆ ಬಿದ್ದಿದೆ. ಸಿಬಿಐ ಅಧಿಕಾರಿಗಳಿಗೆ ಆಂಧ್ರಪ್ರದೇಶದ ಮುಕ್ತ ಪ್ರವೇಶವನ್ನು ಅಲ್ಲಿನ ಸರ್ಕಾರ ನಿರ್ಬಂಧಿಸಿದೆ. ಛತ್ತೀಸಗಡದ ಕಾಂಗ್ರೆಸ್ ಸರ್ಕಾರ ಸಹ ಇದೇ ಹಾದಿ ಅನುಸರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.