ಕೋಲ್ಕತ್ತ: ನಾಲ್ವರು ಅಧಿಕಾರಿಗಳನ್ನು ಚುನಾವಣಾ ಆಯೋಗವು ಅಮಾನತು ಮಾಡಿರುವುದನ್ನು ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಸರ್ಕಾರವು ನಮ್ಮ ನೌಕರರೊಂದಿಗೆ ಇದೆ’ ಎಂದು ಗುರುವಾರ ಹೇಳಿದರು.
ಎರಡು ಜಿಲ್ಲೆಗಳಲ್ಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ ದೋಷ ಎಸಗಿದ ಹಾಗೂ ಕರ್ತವ್ಯಲೋಪದ ಆರೋಪದ ಮೇಲೆ ರಾಜ್ಯ ನಾಗರಿಕ ಸೇವೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ಅಮಾನತುಗೊಳಿಸಿ ಚುನಾವಣಾ ಆಯೋಗವು ಮಂಗಳವಾರ ಆದೇಶ ಹೊರಡಿಸಿತ್ತು.
ಇಬ್ಬರು ಮತದಾರರ ನೋಂದಣಿ ಅಧಿಕಾರಿಗಳು, ಇಬ್ಬರು ಸಹಾಯಕ ನೋಂದಣಿ ಅಧಿಕಾರಿಗಳು ಮತ್ತು ಒಬ್ಬ ಡೇಟಾ ಎಂಟ್ರಿ ಆಪರೇಟರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಆಯೋಗದ ಸಮಿತಿಯು ನಿರ್ದೇಶಿಸಿದೆ.
‘ಚುನಾವಣಾ ದಿನಾಂಕವನ್ನು ಘೋಷಿಸಿದ ಬಳಿಕವೇ ಆಯೋಗವು ಕ್ರಮ ಕೈಗೊಳ್ಳುತ್ತದೆ ಎಂಬುದು ನಮಗೆ ಗೊತ್ತಿದೆ. ಚುನಾವಣೆಗೆ ಇನ್ನೂ ಬಹಳ ಸಮಯ ಉಳಿದಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹೆಸರಿನಲ್ಲಿ ಯಾರನ್ನಾದರೂ ಸೋಲಿಸಬಹುದು ಎಂದು ಆಯೋಗ ಭಾವಿಸಿದೆಯೇ?’ ಎಂದು ಮಮತಾ ಪ್ರಶ್ನಿಸಿದರು.
‘ಯಾವ ನಿಯಮದ ಅಡಿಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ? ಸಂವಿಧಾನದಲ್ಲಿ ಇಂತಹ ಕ್ರಮಕ್ಕೆ ಅವಕಾಶವಿಲ್ಲ. ಎಲ್ಲಾ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ನಮ್ಮ ಸರ್ಕಾರದ ಬೆಂಬಲವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.