ಕೋಲ್ಕತ್ತ: ‘ಬಂಗಾಳಿಗಳ ಮೇಲೆ ಬಿಜೆಪಿಯಿಂದ ಭಾಷಾ ಭಯೋತ್ಪಾದನೆ ನಡೆಯುತ್ತಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಇಲ್ಲಿ ದೂರಿದರು.
ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ‘ಬಂಗಾಳದ ಅಸ್ಮಿತೆ’ಯ ದಾಳವನ್ನು ಮಮತಾ ಉರುಳಿಸಿದ್ದಾರೆ.
‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವ ತನಕವೂ ನೆಲದ ಅಸ್ಮಿತೆ ಹಾಗೂ ಭಾಷೆಯ ಪರವಾದ ಹೋರಾಟ ಮುಂದುವರಿಯಲಿದೆ’ ಎಂದೂ ಹೇಳಿದರು.
‘ಬಿಜೆಪಿಯು ತನ್ನ ಭಾಷಾ ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ, ಪ್ರತಿರೋಧ ಚಳವಳಿಯು ದೆಹಲಿಯನ್ನು ತಲುಪಲಿದೆ’ ಎಂದು ಗುಡುಗಿದರು.
ಕೋಲ್ಕತ್ತದಲ್ಲಿ ನಡೆದ ಟಿಎಂಸಿಯ ಹುತಾತ್ಮರ ದಿನಾಚರಣೆ ರ‍್ಯಾಲಿಗೆ ಜಮಾಯಿಸಿದ್ದ ಅಪಾರ ಸಂಖ್ಯೆಯ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಮಮತಾ, ‘ರಾಜ್ಯದಲ್ಲಿ ಅಧಿಕಾರ ಹಿಡಿಯುವದರ ಜೊತೆಯಲ್ಲೇ, ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಬೇಕು’ ಎಂದು ಹೇಳಿದರು.
‘ಬಂಗಾಳಿಗಳ ವಿರುದ್ಧ ಬಿಜೆಪಿಯು ನಡೆಸಿರುವ ಭಾಷಾ ಭಯೋತ್ಪಾದನೆಗೆ ಪ್ರತಿರೋಧವಾಗಿ, ಜುಲೈ 27ರಿಂದ ಪಶ್ಚಿಮ ಬಂಗಾಳದಲ್ಲಿ ಭಾಷಾ ಚಳವಳಿ ನಡೆಯಲಿದೆ’ ಎಂದು ಇದೇ ಸಂದರ್ಭ ಘೋಷಿಸಿದರು.
ನೆರೆಯ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.