ADVERTISEMENT

ನ್ಯಾಯಾಧೀಶೆಗೆ ತಿರುಚಿದ ಆಶ್ಲೀಲ ಚಿತ್ರಗಳನ್ನು ಕಳುಹಿಸಿ ₹20 ಲಕ್ಷಕ್ಕೆ ಬೇಡಿಕೆ

ಪಿಟಿಐ
Published 9 ಮಾರ್ಚ್ 2023, 11:54 IST
Last Updated 9 ಮಾರ್ಚ್ 2023, 11:54 IST
   

ಜೈಪುರ: ದುಷ್ಕರ್ಮಿಯೊಬ್ಬ ತಿರುಚಿದ ಆಶ್ಲೀಲ ಚಿತ್ರಗಳನ್ನು ಬಳಸಿ ಮಹಿಳಾ ನ್ಯಾಯಾಧೀಶರನ್ನೇ ಬ್ಲಾಕ್‌ಮೇಲ್ ಮಾಡಿರುವ ಪ್ರಕರಣ ರಾಜಸ್ಥಾನದಿಂದ ವರದಿಯಾಗಿದೆ. ಚಿತ್ರಗಳನ್ನು ಬಹಿರಂಗಪಡಿಸದೇ ಇರಲು ₹20 ಲಕ್ಷಕ್ಕೆ ಆತ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಲಾಕ್‌ಮೇಲ್ ಮಾಡಿದ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಾಧೀಶೆಯ ಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡಿರುವ ಆರೋಪಿ, ಬಳಿಕ ಅವುಗಳನ್ನು ತಿರುಚಿ ನ್ಯಾಯಾಲಯದ ಅವರ ಕೊಠಡಿ ಮತ್ತು ಜೈಪುರದ ಅವರ ಮನೆಗೂ ಕಳುಹಿಸಿದ್ದ. ಈ ಕುರಿತಂತೆ ಫೆಬ್ರುವರಿ 28ರಂದೇ ಪ್ರಕರಣ ದಾಖಲಿಸಿಕೊಂಡಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಫೆಬ್ರುವರಿ 7ರಂದು ನನ್ನ ಕೊಠಡಿಗೆ ಬಂದಿದ್ದ ವ್ಯಕ್ತಿ ಸ್ಟೆನೊಗ್ರಾಫರ್‌ ಕೈಗೆ ಒಂದು ಪಾರ್ಸಲ್ ನೀಡಿದ್ದಾನೆ. ನನ್ನ ಮಕ್ಕಳ ಶಾಲೆಯಿಂದ ಬಂದಿದೆ ಎಂದು ಅದನ್ನು ತಂದಿದ್ದ ವ್ಯಕ್ತಿ ಹೇಳಿದ್ದಾನೆ. ಸ್ಟೆನೊಗ್ರಾಫರ್ ಹೆಸರು ಕೇಳಿದಾಗ ಹೇಳದೆ ಪರಾರಿಯಾಗಿದ್ದಾನೆ’ ನ್ಯಾಯಾಧೀಶೆ ನೀಡಿರುವ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಪಾರ್ಸಲ್‌ನಲ್ಲಿ ಸ್ವಲ್ಪ ಸಿಹಿತಿನಿಸು ಮತ್ತು ನ್ಯಾಯಾಧೀಶೆಯ ತಿರುಚಿದ ಅಶ್ಲೀಲ ಚಿತ್ರಗಳಿದ್ದವು. ಜೊತೆಗೆ ಒಂದು ಪತ್ರವನ್ನೂ ಇಟ್ಟಿದ್ದ ದುಷ್ಕರ್ಮಿ, ₹20 ಲಕ್ಷ ನೀಡದಿದ್ದರೆ ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾನೆ.

‘₹20 ಲಕ್ಷ ರೆಡಿ ಮಾಡಿಟ್ಟುಕೊಂಡಿರಿ. ಇಲ್ಲವಾದರೆ, ನೀವು ಮತ್ತು ನಿಮ್ಮ ಕುಟುಂಬವನ್ನು ಹಾಳು ಮಾಡುತ್ತೇನೆ. ಸಮಯ ಮತ್ತು ಸ್ಥಳದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡಲಾಗುವುದು’ಎಂದು ಬ್ಲಾಕ್‌ಮೇಲರ್‌ ಪತ್ರದಲ್ಲಿ ಬೆದರಿಕೆ ಹಾಕಿದ್ದಾನೆ.

ಇದಾದ, 20 ದಿನಗಳ ನಂತರ, ನ್ಯಾಯಾಧೀಶೆಯ ಮನೆಗೆ ಅದೇ ತರಹದ ವಸ್ತುಗಳನ್ನು ಒಳಗೊಂಡ ಮತ್ತೊಂದು ಪಾರ್ಸಲ್ ಕಳುಹಿಸಲಾಗಿದೆ. ಈ ಸಂದರ್ಭ ನ್ಯಾಯಾಧೀಶೆ ದೂರು ದಾಖಲಿಸಿದ್ದಾರೆ.

ನ್ಯಾಯಾಧೀಶೆಯ ಕೊಠಡಿಗೆ ಪಾರ್ಸಲ್ ತಲುಪಿಸಿದ್ದ ವ್ಯಕ್ತಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ ಸುಮಾರು 20 ವರ್ಷದ ಯುವಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.