ADVERTISEMENT

ದೆಹಲಿಯ ವಿಎಚ್‌ಪಿ ಕಚೇರಿಗೆ ಸ್ಫೋಟದ ಬೆದರಿಕೆ: ವ್ಯಕ್ತಿ ಬಂಧನ

ಪಿಟಿಐ
Published 27 ಜುಲೈ 2022, 14:00 IST
Last Updated 27 ಜುಲೈ 2022, 14:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕೇಂದ್ರ ದೆಹಲಿಯ ಝಂದೇವಾಲನ್‌ ಬಡಾವಣೆಯಲ್ಲಿರುವ ವಿಎಚ್‌ಪಿ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ಬುಧವಾರ ಡಿಸಿಪಿ (ಕೇಂದ್ರ) ಶ್ವೇತಾ ಚೌಹಾಣ್‌ ಹೇಳಿದರು.

‘ಬಂಧಿತನನ್ನು ಮಧ್ಯಪ್ರದೇಶದ ಮೂಲದ ಪ್ರಿನ್ಸ್‌ ಪಾಂಡೆ (26) ಎಂದು ಗುರುತಿಸಲಾಗಿದೆ. ಬುಧವಾರ ವಿಎಚ್‌ಪಿ ಕಚೇರಿಗೆ ಬಂದ ಪಾಂಡೆ, ಬೆದರಿಕೆ ಹಾಕಿದ್ದ. ಮಧ್ಯಾಹ್ನ 12:41ಕ್ಕೆ ಈ ಬಗ್ಗೆ ಮಾಹಿತಿ ಬಂದ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಪಾಂಡೆ ಒಬ್ಬ ಪದವೀಧರ. ದೆಹಲಿಯ ಫತೆಪುರ್‌ ಬೆರಿ ಬಡಾವಣೆಯಲ್ಲಿ ವಾಸವಿದ್ದಾನೆ. ತನ್ನ ಹಳ್ಳಿಯಲ್ಲಿ ಕುಟುಂಬವೊಂದು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿತ್ತು. ಈ ವಿಷಯವಾಗಿ ಯಾರೂ ಏನೂ ಮಾಡುತ್ತಿಲ್ಲ ಎಂದು ಕೋಪಗೊಂಡ ಪಾಂಡೆ, ತನ್ನಚಿಕ್ಕಮ್ಮನೊಂದಿಗೆ ವಿಎಚ್‌ಪಿ ಕಚೇರಿಗೆ ಬಂದು, ಸ್ಫೋಟದ ಬೆದರಿಕೆ ಹಾಕಿದ್ದಾನೆ’ ಎಂದು ಶ್ವೇತಾ ಮಾಹಿತಿ ನೀಡಿದರು.

ADVERTISEMENT

‘ಪಾಂಡೆ ರಾಷ್ಟ್ರೀಯ ಸ್ವಯಂ ಸೇವಕಸಂಘದ ಬೆಂಬಲಿಗನೆಂದು ಹೇಳಿಕೊಂಡಿದ್ದು, ಮತಾಂತರ ವಿಷಯದ ಕುರಿತು ಸೆಳೆಯಲು ಬೆದರಿಕೆ ಹಾಕಿದ್ದಾಗಿ ಹೇಳಿದ್ದಾನೆ’ ಎಂದೂ ಅವರು ತಿಳಿಸಿದರು.

ಸದ್ಯ ಪಹರ್‌ಗಂಜ್‌ನ ಪೊಲೀಸರು ಹಾಗೂ ವಿಶೇಷ ಘಟಕ ಮತ್ತು ವಿಶೇಷ ವಿಭಾಗದ ಸಿಬ್ಬಂದಿ ಪಾಂಡೆಯ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.