ADVERTISEMENT

ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಘಟನೆ: ನರಭಕ್ಷಕ ಸೆರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2026, 10:22 IST
Last Updated 14 ಜನವರಿ 2026, 10:22 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು ಕೊಂದು ಮೃತದೇಹ ತಿನ್ನಲು ಯೋಜಿಸಿದ್ದ ನರಭಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕೂಚ್ ಬಿಹಾರ್ ಜಿಲ್ಲೆಯ ದಿನ್ಹಾಟಾದ ಕುರ್ಷಹತ್ ಪ್ರದೇಶದಲ್ಲಿ ಜನವರಿ 10ರಂದು ಈ ಘಟನೆ ನಡೆದಿದೆ. ಇಲ್ಲಿನ ಸ್ಮಶಾನದಲ್ಲಿ ಶವವೊಂದು ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ದಿನ್ಹಾಟಾದ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಧೀಮಾನ್ ಮಿತ್ರ, ಪತ್ತೆಯಾದ ಮೃತದೇಹದ ಮೇಲೆ ಹಲವು ಗಾಯದ ಗುರುತುಗಳು ಪತ್ತೆಯಾಗಿದ್ದವು. ಪ್ರಕರಣ ಸಂಬಂಧ ಫಿರ್ದೌಸ್ ಆಲಂ ಎಂಬಾತನನ್ನು ಬಂಧಿಸಲಾಯಿತು. ವಿಚಾರಣೆಯ ವೇಳೆ ಆತ ವ್ಯಕ್ತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಶವವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ತಿನ್ನುವ ಉದ್ದೇಶ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆದರೆ ಆತ ಮಾನಸಿಕ ಅಸ್ವಸ್ಥನಾಗಿದ್ದು, ಸ್ಥಳೀಯ ಸ್ಮಶಾನದಲ್ಲಿ ಆಶ್ರಯ ಪಡೆದಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೃತ ವ್ಯಕ್ತಿಯ ಜೊತೆ ಯಾವುದೇ ದ್ವೇಷ ಅಥವಾ ವೈರತ್ವ ಇರಲಿಲ್ಲ ಎಂದು ಆರೋಪಿ ತನಿಖಾ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಈ ಘಟನೆಯಿಂದ ನಾವು ದಿಗ್ಭ್ರಮೆಗೊಂಡಿದ್ದೇವೆ. ಆಲಂ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಸದ್ಯ ಆರೋಪಿಯನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದೂ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.