
ಬಂಧನ (ಸಾಂದರ್ಭಿಕ ಚಿತ್ರ)
ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬೂತ್ ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಬೆದರಿಕೆ ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.
ಆರೋಪಿಯನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತ ಜಮೀರುಲ್ ಇಸ್ಲಾಂ ಮೊಲ್ಲಾ ಎಂದು ಗುರುತಿಸಲಾಗಿದೆ. 97 ವರ್ಷದ ವ್ಯಕ್ತಿಯೊಬ್ಬರ ಹೆಸರು 2002ರಲ್ಲಿನ ಮತದಾರರ ಪಟ್ಟಿಯಲ್ಲಿ ಕಾಣಿಸದೇ ಇರುವ ವಿಚಾರದಲ್ಲಿ ಜಮೀರುಲ್ ಅವರು ಬಿಎಲ್‌ಒ ಜತೆ ಜಗಳವಾಡಿದ್ದಾರೆ. ಆ ಬಳಿಕ ದೂರವಾಣಿ ಕರೆ ಮಾಡಿ ‘ಗಂಭೀರ ಪರಿಣಾಮ ಎದುರಿಸಬೇಕಾದೀತು’ ಎಂದು ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ.
ಬಿಎಲ್‌ಒ ದೀಪಕ್ ಮಹಾತೊ ಈ ಸಂಬಂಧ ನಜಾತ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಬೆನ್ನಲ್ಲೇ ಬಂಧನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮೀರುಲ್ ಅವರನ್ನು ಟಿಎಂಸಿಯು ಬೂತ್ ಮಟ್ಟದ ಏಜೆಂಟ್ ಅಗಿ ನೇಮಿಸಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಭಾವಚಿತ್ರ ಪರಿಶೀಲಿಸಲು ಸೂಚನೆ (ನವದೆಹಲಿ ವರದಿ): ಮತದಾರರ ಪಟ್ಟಿಯಲ್ಲಿರುವ ಭಾವಚಿತ್ರಗಳನ್ನು ಸರಿಯಾಗಿ ಪರಿಶೀಲಿಸಿ ಯಾವುದೇ ಲೋಪ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಅಸ್ಸಾಂನಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಸಿಬ್ಬಂದಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
ಬಿಹಾರದ ಮತದಾರರ ಪಟ್ಟಿಯಲ್ಲಿ ಕೆಲವು ಮತದಾರರ ಭಾವಚಿತ್ರದ ಜಾಗದಲ್ಲಿ ಬೆಕ್ಕು ಮತ್ತು ನಾಯಿಯ ಚಿತ್ರಗಳು ಇದ್ದವು ಎಂದು ವರದಿಯಾಗಿದ್ದವು. ಅಂತಹ ಲೋಪ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಸ್ಸಾಂನ ಮುಖ್ಯ ಚುನಾವಣಾ ಅಧಿಕಾರಿಗೆ ನೀಡಿದ ಸೂಚನೆಯಲ್ಲಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.