ADVERTISEMENT

ಕೇರಳ: ಪಾಲಕ್ಕಾಡ್‌ ಜಿಲ್ಲೆಯ ಚೇರಾಡ್‌ ಪರ್ವತದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ

ಕೇರಳ: ಪಾಲಕ್ಕಾಡ್‌ ಜಿಲ್ಲೆಯ ಚೇರಾಡ್‌ ಪರ್ವತದಲ್ಲಿ ಸೇನಾಪಡೆಗಳಿಂದ ಕಾರ್ಯಾಚರಣೆ

ಪಿಟಿಐ
Published 9 ಫೆಬ್ರುವರಿ 2022, 11:30 IST
Last Updated 9 ಫೆಬ್ರುವರಿ 2022, 11:30 IST
ಕೇರಳ: ಪಾಲಕ್ಕಾಡ್‌ ಜಿಲ್ಲೆಯ ಚೇರಾಡ್‌ ಪರ್ವತದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ – ಪ್ರಜಾವಾಣಿ ಚಿತ್ರ
ಕೇರಳ: ಪಾಲಕ್ಕಾಡ್‌ ಜಿಲ್ಲೆಯ ಚೇರಾಡ್‌ ಪರ್ವತದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ – ಪ್ರಜಾವಾಣಿ ಚಿತ್ರ   

ಪಾಲಕ್ಕಾಡ್: ರಾಜ್ಯದ ಪಾಲಕ್ಕಾಡ್‌ ಜಿಲ್ಲೆಯ ಬೆಟ್ಟವೊಂದರ ಸೀಳಿನಲ್ಲಿ ಸಿಲುಕಿದ್ದ ಯುವಕನನ್ನು ಸೇನಾಪಡೆಗಳು ನಡೆಸಿದ ಸಾಹಸಮಯ ಕಾರ್ಯಾಚರಣೆ ಮೂಲಕ ಬುಧವಾರ ರಕ್ಷಿಸಲಾಗಿದೆ.

ಬಾಬು ಆರ್‌ (23) ರಕ್ಷಿಸಲಾದ ಯುವಕ. ನಿಶ್ಶಕ್ತನಾಗಿದ್ದ ಅವರನ್ನು ಏರ್‌ಲಿಫ್ಟ್‌ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತನ್ನ ಮೂವರು ಸ್ನೇಹಿತರೊಂದಿಗೆ ಸೋಮವಾರ ಮಧ್ಯಾಹ್ನ ಬಾಬು ಅವರು ಜಿಲ್ಲೆಯ ಮಲಂಪುಳ ಎಂಬಲ್ಲಿನ ಚೇರಾಡ್‌ ಬೆಟ್ಟಕ್ಕೆ ಚಾರಣಕ್ಕಾಗಿ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಯುವಕರ ತಂಡ 1,000 ಮೀಟರ್‌ ಎತ್ತರ ಏರಿದೆ. ಆಗ, ಜಾರಿ ಬಿದ್ದ ಬಾಬು 400 ಮೀ. ಕೆಳಗೆ ಇರುವ ಸೀಳಿನಲ್ಲಿ ಸಿಲುಕಿದ್ದರು.

ADVERTISEMENT

ಬಿಸಿಲಿನ ಝಳ ಹಾಗೂ ವಿಪರೀತ ಚಳಿಯಂತಹ ಹವಾಮಾನ ಒಂದೆಡೆಯಾದರೆ, ಯಾವುದೇ ಆಹಾರ–ನೀರು ಇಲ್ಲದೇ ಎರಡು ದಿನಗಳ ಕಾಲ ಬಾಬು ಬೆಟ್ಟದ ಸೀಳಿನಲ್ಲಿ ಕಳೆದಿದ್ದಾರೆ. ರಕ್ಷಣೆಗಾಗಿ ಎದುರು ನೋಡುತ್ತಿದ್ದ ಬಾಬು ಅವರಿಗೆ ವನ್ಯಮೃಗಗಳಿಂದಲೂ ಅಪಾಯ ಇತ್ತು ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿರುವ ಪ್ಯಾರಾ ರೆಜಿಮೆಂಟಲ್‌ ಸೆಂಟರ್ ಹಾಗೂ ಎನ್‌ಡಿಆರ್‌ಎಫ್‌ನ ತಲಾ ಒಂದು ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವು. ಲೆಫ್ಟಿನೆಂಟ್‌ ಜನರಲ್ ಅರುಣ್‌ ಅವರು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು. ಮದ್ರಾಸ್‌ ರೆಜಿಮೆಂಟ್, ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಸಹ ಈ ಕಾರ್ಯಾಚರಣೆಯ ಭಾಗವಾಗಿದ್ದವು.

‘ಒಂದು ತಂಡ ಬೆಟ್ಟದ ತುದಿ ತಲುಪಿ, ಬಾಬು ಅವರೊಂದಿಗೆ ಸಂಪರ್ಕ ಸಾಧಿಸಿ, ರಕ್ಷಣಾ ಕಾರ್ಯ ಕುರಿತು ಮಾಹಿತಿ ನೀಡಿತು. ಆತನ ಬಹಳ ನಿಶ್ಶಕ್ತನಾಗಿರುವುದು ಕಂಡು ಬಂದ ತಕ್ಷಣ, ಆತನಿಗೆ ನೀರು ಮತ್ತು ಆಹಾರ ಒದಗಿಸಲು ಕ್ರಮ ಕೈಗೊಳ್ಳಲಾಯಿತು’ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

‘ಅತ್ಯಂತ ಅಪಾಯಕಾರಿಯಾದ, ಪರ್ವತದ ಸೀಳಿನಲ್ಲಿ ಸಿಲುಕಿದ್ದ ಬಾಬು ಎಂಬ ಚಾರಣಿಗನನ್ನು ಸದರ್ನ್ ಕಮಾಂಡ್ ಯೋಧರು ಧೀರೋದಾತ್ತ ಕಾರ್ಯಾಚರಣೆ ಮೂಲಕ ರಕ್ಷಿಸಿದ್ದಾರೆ’ ಎಂದು ಸೇನೆಯ ಸದರ್ನ್‌ ಕಮಾಂಡ್‌ ಟ್ವೀಟ್‌ ಮಾಡಿದೆ.

ವಿಡಿಯೊ ಬಿಡುಗಡೆ: ಯುವಕನನ್ನು ರಕ್ಷಿಸುವ ಸಾಹಸಮಯ ಕಾರ್ಯಾಚರಣೆಯ ದೃಶ್ಯಗಳಿರುವ ವಿಡಿಯೊವೊಂದನ್ನು ಸೇನೆ ಬಿಡುಗಡೆ ಮಾಡಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸಂತಸಗೊಂಡು, ನಿರಾಳರಾಗಿದ್ದ ಬಾಬು ಅವರು ತನ್ನನ್ನು ರಕ್ಷಿಸಿದ ಯೋಧರ ನಡುವೆ ಕುಳಿತಿರುವುದು, ಅವರಲ್ಲಿ ಕೆಲವರಿಗೆ ಮುತ್ತಿಕ್ಕಿ, ‘ಭಾರತೀಯ ಸೇನೆಗೆ ಧನ್ಯವಾದಗಳು’ ಎಂಬುದಾಗಿ ಹೇಳುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. ನಂತರ, ಎಲ್ಲರೂ ‘ಇಂಡಿಯನ್‌ ಆರ್ಮಿ ಕಿ ಜೈ’, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಎಲ್ಲ ಪಕ್ಷಗಳ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಸೇನೆ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

***

ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಎಲ್ಲ ಯೋಧರಿಗೆ ಧನ್ಯವಾದಗಳು. ಯುವಕನ ಚೇತರಿಕೆಗೆ ಅಗತ್ಯವಿರುವ ಚಿಕಿತ್ಸೆ ಹಾಗೂ ನೆರವನ್ನು ನೀಡಲಾಗುವುದು

ಪಿಣರಾಯಿ ವಿಜಯನ್, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.