ADVERTISEMENT

Sabarimala | ಮಂಡಲ–ಮಕರವಿಳಕ್ಕು ಮಹೋತ್ಸವ ಮುಕ್ತಾಯ: ಮುಚ್ಚಿದ ಶಬರಿಮಲೆ ದೇಗುಲ

ಪಿಟಿಐ
Published 20 ಜನವರಿ 2025, 4:54 IST
Last Updated 20 ಜನವರಿ 2025, 4:54 IST
<div class="paragraphs"><p>ಶಬರಿಮಲೆ</p></div>

ಶಬರಿಮಲೆ

   

– ಪಿಟಿಐ ಚಿತ್ರ

ಶಬರಿಮಲೆ: ಮಂಡಲ–ಮಕರವಿಳಕ್ಕು ಮಹೋತ್ಸವ ಮುಕ್ತಾಯಗೊಂಡಿದ್ದು, ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಸೋಮವಾರ ಬೆಳಿಗ್ಗೆ ವಿಧ್ಯುಕ್ತವಾಗಿ ಮುಚ್ಚಲಾಯಿತು ಎಂದು ಟ್ರಾವಂಕೂರ್ ದೇವಸ್ವಂ ಬೋರ್ಟ್ (ಟಿಡಿಬಿ) ಹೇಳಿದೆ.

ADVERTISEMENT

2024-25ರ ತೀರ್ಥಯಾತ್ರೆಯ ಋತುವಿನಲ್ಲಿ ಭಕ್ತರ ಮಹಾಪೂರವೇ ಹರಿದು ಬಂದಿದೆ. ಸುಮಾರು 53 ಲಕ್ಷ ಭಕ್ತರು ಶಬರಿ ಮಲೆಗೆ ಬಂದಿದ್ದಾಗಿ ಟಿಡಿಬಿ ತಿಳಿಸಿದೆ.

ಪಂದಳ ರಾಜ ಕುಟುಂಬದ ಪ್ರತಿನಿಧಿ ತ್ರಿಕ್ಕೇಟನಲ್ ರಾಜರಾಜ ಶರ್ಮಾ ಅವರು ದರ್ಶನ ಪ‍ಡೆದ ಬಳಿಕ ಬೆಳಿಗ್ಗೆ 6.30ಕ್ಕೆ ದೇಗುಲವನ್ನು ಮುಚ್ಚಲಾಯಿತು. ಬೆಳಿಗ್ಗೆ 5 ಗಂಟೆಗೆ ತೆರೆದ ದೇಗುಲದ ಪೂರ್ವ ಮಂಡಪಂನಲ್ಲಿ ಗಣಪತಿ ಹೋಮ ನಡೆಯಿತು.

ಬಳಿಕ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ಮೇಲ್‌ಶಾಂತಿ ಅರುಣ್ ಕುಮಾರ್ ನಂಬೂದಿರಿಯವರು ರುದ್ರಾಕ್ಷಿ ಮಾಲೆ ಧರಿಸಿ, ಯೋಗ ದಂಡ ಕೈಯಲ್ಲಿ ಹಿಡಿದುಕೊಂಡು ವಿಭೂತಿಯಾಭಿಷೇಕ ನಡೆಸಿದರು. ಬಳಿಕ ‘ಹರಿವರಾಸನಮ್’ ಪಠಿಸಿ, ದೀಪ ಆರಿಸಿ ದೇಗುಲದ ಬಾಗಿಲುಗಳನ್ನು ಮೇಲ್‌ಶಾಂತಿಯವರು ಮುಚ್ಚಿದರು ಎಂದು ಪ್ರಕಟಣೆ ಹೇಳಿದೆ.

ಕೀಲಿಗಳನ್ನು ರಾಜಮನೆತನದ ಪ್ರತಿನಿಧಿಗೆ ಹಸ್ತಾಂತರಿಸಲಾಯಿತು. 18 ಮೆಟ್ಟಿಲುಗಳನ್ನು ಇಳಿದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಬಳಿಕ ಕೀಲಿಯನ್ನು ದೇವಸ್ವಂ ಬೋರ್ಡ್ ಪ್ರತಿನಿಧಿ ಹಾಗೂ ಮೇಲ್‌ಶಾಂತಿ ಸಮ್ಮುಖದಲ್ಲಿ ಶಬರಿಮಲೆ ಆಡಳಿತಾಧಿಕಾರಿ ಬಿಜು ವಿ. ನಾಥ್‌ಗೆ ಹಸ್ತಾಂತರಿಸಲಾಯಿತು.

ರಾಜ ಮನೆತನದ ಪ್ರತಿನಿಧಿ ಹಾಗೂ ಅವರ ಪರಿವಾರ ಪಂದಳಂ ಅರಮನೆಗೆ ತೆರಳಿತು. ಜ. 23ರಂದು ತಿರುವಾಭರಣಂ ಮೆರವಣಿಗೆ ಪಂದಳಕ್ಕೆ ತಲುಪಲಿದೆ ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.