
ಪ್ರಾತಿನಿಧಿಕ ಚಿತ್ರ
ನವದೆಹಲಿ: ‘ಮೊದಲನೇ ಪರೀಕ್ಷೆಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಬರಿಯಲೇಬೇಕು. ಇಲ್ಲವಾದಲ್ಲಿ ಎರಡನೇ ಪರೀಕ್ಷೆಗೆ ಅವಕಾಶವಿಲ್ಲ’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಸೋಮವಾರ ಸ್ಪಷ್ಟನೆ ನೀಡಿದೆ.
ಮೊದಲನೇ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆ ಬರೆಯಲು ಅವಕಾಶ ನೀಡಬಹುದೇ ಎನ್ನುವ ಬಗ್ಗೆ ಸ್ಪಷ್ಟನೆ ಕೋರಿ ಸಿಬಿಎಸ್‌ಇಗೆ ಮನವಿಗಳನ್ನು ಸಲ್ಲಿಸಲಾಗಿತ್ತು. 10ನೇ ತರಗತಿಗೆ ನಡೆಯಲಿರುವ ಎರಡು ಪಬ್ಲಿಕ್ ಪರೀಕ್ಷೆಗಳಿಗೆ ಸಂಬಂಧಿಸಿ ಇರುವ ನಿಯಮಗಳ ಕುರಿತು ಉದ್ಭವಿಸಿರುವ ಕೆಲವು ಗೊಂದಲಗಳಿಗೆ ಸಿಬಿಎಸ್‌ಇ ಈ ಸ್ಪಷ್ಟನೆ ನೀಡಿದೆ.
‘ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳನ್ನು ಮೊದಲನೇ ಪರೀಕ್ಷೆಯಲ್ಲಿ ಬರೆಯದಿದ್ದರೆ, ಅಂಥ ವಿದ್ಯಾರ್ಥಿಯು ಎರಡನೇ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿಲ್ಲ. ಇಂಥವರನ್ನು ‘ಪುನರಾವರ್ತಿತ ಅಭ್ಯರ್ಥಿ’ ಎಂದು ವಿಭಾಗೀಕರಿಸಲಾಗುವುದು. ಮತ್ತು ಈ ವಿದ್ಯಾರ್ಥಿಯು ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯುವ ಮೊದಲೇ ಪರೀಕ್ಷೆಯಲ್ಲಿ, ಪರೀಕ್ಷೆ ಬರೆಯಬಹುದಾಗಿದೆ’ ಎಂದು ಮಂಡಳಿ ವಿವರಿಸಿದೆ.
ಮೊದಲನೆಯದು ಅಂತಿಮ ಪರೀಕ್ಷೆಯಾಗಿರಲಿದ್ದು, ಎರಡನೆಯದು ಅಂಕಗಳನ್ನು ಉತ್ತಮಪಡಿಸಿಕೊಳ್ಳುವ ಅವಕಾಶ ಇರುವ ಮತ್ತೊಂದು ಪರೀಕ್ಷೆಯಾಗಿರಲಿದೆ. ಮಂಗಳವಾರದಿಂದ 10ನೇ ಮತ್ತು 12ನೇ ತರಗತಿಗೆ ಮೊದಲನೇ ಪರೀಕ್ಷೆ ಆರಂಭವಾಗಲಿದೆ. ಶಿಕ್ಷಣ ನೀತಿ 2020ರಲ್ಲಿ ಪರೀಕ್ಷಾ ಪದ್ಧತಿಯನ್ನು ಬದಲಾವಣೆ ಮಾಡಲಾಗಿತ್ತು.
‘ಪ್ರಶ್ನೆ ಪತ್ರಿಕೆ ಸೋರಿಕೆ ಎಂಬ ಸುಳ್ಳು ಸುದ್ದಿ: ಇರಲಿ ಎಚ್ಚರ’
ಪರೀಕ್ಷೆಗಳು ನಡೆಯುವ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತವೆ. ಇಂಥ ಸುದ್ದಿಗಳಿಗೆ ಕಿವಿಗೊಡಬಾರದು. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಹಾದಿ ತಪ್ಪಿಸುವ ಘಟನೆಗಳು ಈ ಹಿಂದೆ ನಡೆದಿವೆ. ಶಾಲೆಗಳು ಕೂಡ ಇಂಥ ಸುದ್ದಿಗಳನ್ನು ನಂಬಬಾರದು ಮತ್ತು ಇಂಥ ಸುದ್ದಿಗಳ ಬಗ್ಗ ಎಚ್ಚರದಿಂದ ಇರಬೇಕು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)
* ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳಲ್ಲಿ ಯಾವುದಾದರೂ ಮೂರು ವಿಷಯಗಳಲ್ಲಿ ಮಾತ್ರವೇ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಎರಡನೇ ಪರೀಕ್ಷೆ ಬರೆಯಬಹುದು
* ಒಂದು ವೇಳೆ ಮೊದಲನೇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಎರಡನೇ ಪರೀಕ್ಷೆ ವೇಳೆ ‘ಅನುತ್ತೀರ್ಣ’ ವಿಭಾಗದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.