ರಾಷ್ಟ್ರೀಯ ಬಾಲ ಪುರಸ್ಕೃತರು
(ಚಿತ್ರ ಕೃಪೆ: X/@rashtrapatibhvn)
ನವದೆಹಲಿ: ಮಂಗಳೂರಿನ ಯುವ ಪ್ರತಿಭೆ ಸಿಂಧೂರ ರಾಜಾ ಉಳ್ಳಾಲ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿದರು.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.
ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಅನೇಕ ಆವಿಷ್ಕಾರಗಳನ್ನು ಮಾಡಿರುವ ಸಿಂಧೂರ ಅವರು ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಅವರು ನ್ಯೂ ಹೊರೈಜಾನ್ ಪಬ್ಲಿಕ್ ಸ್ಕೂಲ್‌ನ ಮಾಜಿ ವಿದ್ಯಾರ್ಥಿನಿ. ಈಗ ಅವರು ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ.
ವೈಜ್ಞಾನಿಕ ಸಾಧನೆಗಾಗಿ ಅವರಿಗೆ ಅಮೆರಿಕದ ವರ್ಲ್ಡ್ ಸೈನ್ಸ್ ಸ್ಕಾಲರ್ ಪದವಿ ದೊರೆತಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ವೊಲ್ಫ್ರಾಮ್ ರಿಸರ್ಚ್ ಸೆಂಟರ್ ಜೊತೆಗೆ ಕ್ರಿಪ್ಟೋಕಾಕಸ್ ನಿಯೋಫಾರ್ಮಾನ್ಸ್ ಎಂಬ ಪ್ಯಾಥೊಜೆನಿಕ್ ಈಸ್ಟ್ ಕುರಿತು ಪ್ರಯೋಗ ನಡೆಸುತ್ತಿದ್ದಾರೆ.
‘ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗಿದೆ. ಈ ಪ್ರಶಸ್ತಿ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಧಾನಿ ಅವರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತು. ಈ ಪ್ರಶಸ್ತಿಯಿಂದ ಇನ್ನಷ್ಟು ಪ್ರಯತ್ನ ಮಾಡಲು ಪ್ರೇರಣೆ ಸಿಕ್ಕಿದೆ. ಗ್ರಾಮೀಣ ಭಾರತಕ್ಕೆ ಅನುಕೂಲವಾಗುವಂತಹ ಇನ್ನಷ್ಟು ಕೆಲಸ ಮಾಡಲಿದ್ದೇನೆ’ ಎಂದು ಸಿಂಧೂರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.