ADVERTISEMENT

ಮಣಿಪುರದ ನೂತನ ಸಿಎಂ ಆಗಿ ಬಿಜೆಪಿ ನಾಯಕ ಖೇಮ್‌ಚಂದ್ ಪ್ರಮಾಣವಚನ

​ಪ್ರಜಾವಾಣಿ ವಾರ್ತೆ
ಪಿಟಿಐ
Published 4 ಫೆಬ್ರುವರಿ 2026, 14:52 IST
Last Updated 4 ಫೆಬ್ರುವರಿ 2026, 14:52 IST
   

ಇಂಫಾಲ್: ಮಣಿಪುರದ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ವೈ ಖೇಮ್‌ಚಂದ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆ ಬುಧವಾರ(ಫೆ.05) ಕೊನೆಗೊಂಡಿತ್ತು. ಅದರ ಬೆನ್ನಲ್ಲೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು, 62 ವರ್ಷದ ಖೇಮ್‌ಚಂದ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ADVERTISEMENT

ಕುಕಿ ಸಮುದಾಯಕ್ಕೆ ಸೇರಿದ ಬಿಜೆಪಿ ಶಾಸಕ ನೆಮ್ಚಾ ಕಿಪ್‌ಜೆನ್ ನವದೆಹಲಿಯ ಮಣಿಪುರ ಭವನದಿಂದ ವರ್ಚುವಲ್ ಆಗಿ, ನಾಗಾ ಪೀಪಲ್ಸ್ ಫ್ರಂಟ್‌ನ ಶಾಸಕ ಎಲ್ ಡಿಖೋ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಬಿಜೆಪಿಯ ಗೋವಿಂದಾಸ್ ಕೊಂಥೌಜಮ್ ಮತ್ತು ಎನ್‌ಪಿಪಿಯ ಕೆ. ಲೋಕೆನ್ ಸಿಂಗ್ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದಾದ ಕೆಲವೇ ಗಂಟೆಗಳ ನಂತರ ಇಲ್ಲಿನ ಲೋಕ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಕಳೆದ ವರ್ಷ ಫೆಬ್ರುವರಿಯಿಂದ ಮಣಿಪುರ ರಾಷ್ಟ್ರಪತಿ ಆಳ್ವಿಕೆಯಲ್ಲಿತ್ತು.

ಸಮಾರಂಭದಲ್ಲಿ ಹಲವಾರು ಬಿಜೆಪಿ ಶಾಸಕರು, ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ರಾಜ್ಯದ ಎನ್‌ಡಿಎಯ ಉನ್ನತ ನಾಯಕರು ಭಾಗವಹಿಸಿದ್ದರು.

ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಬಹುಸಂಖ್ಯಾತ ಮೈತೇಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದ್ದರಿಂದ 2023ರ ಮೇ 3ರಿಂದ ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.

ಅಂದಿನಿಂದ, ಕುಕಿ ಮತ್ತು ಮೈತೇಯಿ ಸಮುದಾಯಗಳ ಜನರುರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 260 ಜನರು ಹಿಂಸಾಚಾರದಲ್ಲಿ ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.