ADVERTISEMENT

ಮ್ಯಾನ್ಮಾರ್ ಗಡಿಯಲ್ಲಿ FMR ರದ್ದತಿಗೆ ನಿರ್ಧಾರ: ಮೋದಿಗೆ ಮಣಿಪುರ ಸಿಎಂ ಧನ್ಯವಾದ

ಪಿಟಿಐ
Published 8 ಫೆಬ್ರುವರಿ 2024, 9:35 IST
Last Updated 8 ಫೆಬ್ರುವರಿ 2024, 9:35 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಇಂಫಾಲ: ಭಾರತ ಹಾಗೂ ಮ್ಯಾನ್ಮಾರ್ ನಡುವಣ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಒಪ್ಪಂದ (ಎಫ್‌ಎಂಆರ್‌) ಅನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರಿಗೆ ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಗುರುವಾರ ಧನ್ಯವಾದ ತಿಳಿಸಿದ್ದಾರೆ.

ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸುವ ಸಲುವಾಗಿ ಮತ್ತು ಈಶಾನ್ಯ ರಾಜ್ಯಗಳ ಜನಸಂಖ್ಯೆಯಲ್ಲಿ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮ್ಯಾನ್ಮಾರ್‌ ಗಡಿಯಲ್ಲಿ ಎಫ್‌ಎಂಆರ್‌ ರದ್ದುಪಡಿಸಲು ತೀರ್ಮಾನಿಸಿದೆ ಎಂದು ಅಮಿತ್‌ ಶಾ ಅವರು ಇಂದು ಹೇಳಿದ್ದಾರೆ.

ADVERTISEMENT

ಭಾರತ ಹಾಗೂ ಮ್ಯಾನ್ಮಾರ್‌ ಗಡಿ ಭಾಗದಲ್ಲಿ ವಾಸಿಸುವ ಜನರು ಉಭಯ ದೇಶಗಳ ಭೂ ಪ್ರದೇಶದೊಳಗೆ 16ಕಿ.ಮೀ ದೂರದ ವರೆಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲದೆ ಸಂಚರಿಸಲು ಎಫ್‌ಎಂಆರ್‌ ಅವಕಾಶ ಕಲ್ಪಿಸುತ್ತದೆ.

ಅಮಿತ್‌ ಶಾ ಹೇಳಿಕೆ ಕುರಿತು ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸಿಂಗ್‌, 'ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಗಡಿ ರಕ್ಷಣೆ ಬಗ್ಗೆ ಹೊಂದಿರುವ ಬದ್ಧತೆಯ ಬಗ್ಗೆ ಕೃತಜ್ಞನಾಗಿದ್ದೇನೆ. ಭಾರತದ ಆಂತರಿಕ ಭದ್ರತೆ ಮತ್ತು ಈಶಾನ್ಯ ರಾಜ್ಯಗಳ ಜನಸಂಖ್ಯಾ ಸಮಗ್ರತೆಯನ್ನು ಪರಿಗಣಿಸಿ ಎಫ್‌ಎಂಆರ್‌ ರದ್ದತಿಗೆ ಕೇಂದ್ರ ಗೃಹ ಸಚಿವರು ಮಾಡಿದ್ದ ಶಿಫಾರಸ್ಸಿನ ಅನುಸಾರ ಭಾರತ ಮತ್ತು ಮ್ಯಾನ್ಮಾರ್‌ ನಡುವಣ ಎಫ್‌ಎಂಆರ್‌ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.

'ಅಕ್ರಮ ವಲಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಐತಿಹಾಸಿಕ ನಿರ್ಧಾರವಾಗಲಿದೆ ಮತ್ತು 1,643 ಕಿ.ಮೀ. ದೂರದ ಭಾರತ–ಮ್ಯಾನ್ಮಾರ್‌ ಗಡಿಯುದ್ದಕ್ಕೂ ತಂತಿಬೇಲಿ ಹಾಕಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದ ಬಳಿಕ ನಮ್ಮ ಆಂತರಿಕ ಭದ್ರತೆಗೆ ಇನ್ನಷ್ಟು ಬಲ ಬಂದಿದೆ' ಎಂದೂ ಸಿಂಗ್‌ ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯವು ಎಫ್‌ಎಂಆರ್‌ ರದ್ದು ಪಡಿಸುವ ಪ್ರಕ್ರಿಯೆ ಮುಂದುವರಿಸಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ಎಫ್‌ಎಂಆರ್‌ ರದ್ದತಿ ಮತ್ತು ಬೇಲಿ ಅಳವಡಿಸುವ ಕ್ರಮದಿಂದ ಮಾದಕವಸ್ತು, ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಅಕ್ರಮ ವಲಸೆಗೆ ಕಡಿವಾಣ ಬೀಳಲಿದೆ ಎಂದು ಹೇಳಲಾಗಿದೆ.

ಆದಾಗ್ಯೂ, ನಾಗಾ ಮತ್ತು ಕುಕಿ ಸಮುದಾಯಗಳಿಗೆ ಸಂಬಂಧಿಸಿದ ಸಂಘಟನೆಗಳು ಕೇಂದ್ರದ ನಿರ್ಧಾರವನ್ನು ಬಲವಾಗಿ ವಿರೋಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.