ADVERTISEMENT

ಮಣಿಪುರ ಮುಖ್ಯಮಂತ್ರಿ: ಮೂವರು ನಾಯಕರ ಹೆಸರುಗಳು ಮುಂಚೂಣಿಯಲ್ಲಿ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2025, 14:20 IST
Last Updated 11 ಫೆಬ್ರುವರಿ 2025, 14:20 IST
<div class="paragraphs"><p><strong>ರಾಧೆಶ್ಯಾಂ ಸಿಂಗ್‌</strong></p></div>

ರಾಧೆಶ್ಯಾಂ ಸಿಂಗ್‌

   

ಇಂಫಾಲ್: ಮಣಿಪುರದ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಪ್ರಮುಖವಾಗಿ ಮೂವರು ನಾಯಕರ ಹೆಸರುಗಳು ಕೇಳಿ ಬರುತ್ತಿವೆ. 

ಎನ್. ಬಿರೇನ್ ಸಿಂಗ್ ಅವರು ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿ ಈಶಾನ್ಯ ರಾಜ್ಯಗಳ ಉಸ್ತುವಾರಿ ಸಂಬಿತ್ ಪಾತ್ರಾ ಅವರು ಮಣಿಪುರದಲ್ಲೇ ಠಿಕಾಣಿ ಹೂಡಿದ್ದಾರೆ.

ADVERTISEMENT

ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಪಕ್ಷದ ಹಿರಿಯ ನಾಯಕರು, ಹಲವು ಶಾಸಕರು, ಸಚಿವರು ಮತ್ತು ವಿಧಾನಸಭೆಯ ಸ್ಪೀಕರ್ ಜೊತೆ ಸಭೆ ನಡೆಸಿದ್ದಾರೆ. ಮಂಗಳವಾರ ಸಂಜೆ ಸಂಬಿತ್ ಪಾತ್ರಾ ಅವರು ಬಿಜೆಪಿ ಮಣಿಪುರ ಘಟಕದ ಅಧ್ಯಕ್ಷೆ ಎ. ಶಾರದಾದೇವಿ ಅವರೊಂದಿಗೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿ ಮಾಡಿ, ಸರಿಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ.

ಮಣಿಪುರ ಬಿಜೆಪಿ ಘಟಕದ ಬಲ್ಲ ಮೂಲಗಳ ಪ್ರಕಾರ ಮೂವರು ಹಿರಿಯ ನಾಯಕರ ಹೆಸರುಗಳು ಮುಂಚೂಣಿಯಲ್ಲಿವೆ...

1. ರಾಧೆಶ್ಯಾಂ ಸಿಂಗ್‌

ನಿವೃತ್ತ ಐಪಿಎಸ್ ಅಧಿಕಾರಿ ರಾಧೆಶ್ಯಾಂ ಸಿಂಗ್‌ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಸಂಘರ್ಷಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಶಾಂತಿ ಮತ್ತೆ ನೆಲಸುವಂತೆ ಮಾಡಲು ರಾಧೆಶ್ಯಾಂ ಸಿಂಗ್‌ ಸೂಕ್ತ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿವೆ. 

ಎರಡು ಬಾರಿ ಶಾಸಕರಾಗಿರುವ ರಾಧೆಶ್ಯಾಂ ಸಿಂಗ್‌ ಅವರು ಬಿರೇನ್ ಸಿಂಗ್ ಅವರ ಸಂಪುಟದಲ್ಲಿ ಶಿಕ್ಷಣ, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು. ಮಣಿಪುರ ಮುಖ್ಯಮಂತ್ರಿಗಳಿಗೆ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ.

2006 ಮತ್ತು 2013ರಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪಡೆದಿದ್ದಾರೆ. ಹಾಗೂ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಮಾನವ ಹಕ್ಕುಗಳ ಪ್ರಾದೇಶಿಕ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. 

2. ಬಸಂತಾ ಕುಮಾರ್ ಸಿಂಗ್

ಬಸಂತಾ ಕುಮಾರ್ ಸಿಂಗ್ ಅವರು ನಂಬೋಲ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಸದ್ಯ ಅವರು ಬಿರೇನ್ ಸಿಂಗ್ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.

ಹಿರಿತನದಲ್ಲಿ ಅವರ ಹೆಸರನ್ನು ಪರಿಗಣಿಸಲಾಗಿದ್ದು ಪಕ್ಷದಲ್ಲಿ ಎಲ್ಲರೊಂದಿಗೂ ಬಸಂತಾ ಕುಮಾರ್ ಸಿಂಗ್ ಉತ್ತಮ ಸಂಬಂಧ ಹೊಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರು ಆರ್‌ಎಸ್‌ಎಸ್‌ ಶಾಖೆಯಿಂದ ಬಂದವರು.

3. ಶಾರದಾದೇವಿ

ಬಿಜೆಪಿ ಮಣಿಪುರ ಘಟಕದ ಅಧ್ಯಕ್ಷೆ ಎ. ಶಾರದಾದೇವಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

14 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಮುಖ್ಯಮಂತ್ರಿಗಳಿದ್ದು, ಯಾರೊಬ್ಬರೂ ಮಹಿಳೆಯರಿಲ್ಲ. ಹೀಗಾಗಿ, ಮಹಿಳೆಯೊಬ್ಬರನ್ನು ಮುಖ್ಯಮಂತ್ರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮೂವರಲ್ಲಿ ಯಾರಾದರೂ ಒಬ್ಬರನ್ನು ಮುಖ್ಯಮಂತ್ರಿ ಮಾಡಿದರೂ ಕುಕಿ ಮತ್ತು ಮೈತೇಯಿ ಸಮುದಾಯದ ಶಾಸಕರು ಬೆಂಬಲಿಸಲಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.