ADVERTISEMENT

ಇಂಫಾಲ ಕಣಿವೆಯ ಹೊರವಲಯದಲ್ಲಿ 'ರೈತ ಸುರಕ್ಷತಾ ವಲಯ' ಸ್ಥಾಪನೆಗೆ COCOMI ಆಗ್ರಹ

ಪಿಟಿಐ
Published 21 ಜೂನ್ 2025, 11:31 IST
Last Updated 21 ಜೂನ್ 2025, 11:31 IST
   

ಇಂಫಾಲ(ಮಣಿಪುರ): ಬಿಷ್ಣುಪುರ ಜಿಲ್ಲೆಯಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ರೈತರೊಬ್ಬರು ಗಾಯಗೊಂಡಿದ್ದಾರೆ. ಈ ನಡುವೆ ಇಂಫಾಲ ಕಣಿವೆಯ ಹೊರವಲಯದಲ್ಲಿ 'ರೈತ ಸುರಕ್ಷತಾ ವಲಯ' ಸ್ಥಾಪಿಸುವಂತೆ ಮಣಿಪುರದ ಮೈತೇಯಿ ಸಮುದಾಯಗಳ ಸಮಗ್ರತೆಯ ಸಮನ್ವಯ ಸಮಿತಿ (ಕೊಕೊಮಿ) ಶನಿವಾರ ಒತ್ತಾಯಿಸಿದೆ.

ಕಣಿವೆಯ ಹೊರವಲಯದಲ್ಲಿ ಒಳನುಗ್ಗುವ ಶಸ್ತ್ರಸಜ್ಜಿತರು, ವಿಶೇಷವಾಗಿ ರೈಫಲ್‌ಗಳು ಅಥವಾ ಮಾರಕ ಆಯುಧ ಹೊಂದಿರುವವರನ್ನು ಎದುರಿಸಲು 'ಕಂಡಲ್ಲಿ ಗುಂಡು ಹಾರಿಸುವ ಆದೇಶ' ನೀಡುವಂತೆ ಕೊಕೊಮಿ ಆಗ್ರಹಿಸಿದೆ.

‌‌ರೈತನ ಮೇಲಿನ ಗುಂಡಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ ಕೊಕೊಮಿ, ಎಸ್‌ಎಸ್‌ಬಿ ಭದ್ರತಾ ರೇಖೆಯಿಂದ ಕೇವಲ 30 ಮೀಟರ್ ದೂರದಿಂದ ರೈತ ನಿಂಗ್‌ತೌಜಮ್‌ ಬಿರೇನ್‌ ಸಿಂಗ್ ಅವರ ಮೇಲೆ ಗುಂಡು ಹಾರಿಸಲಾಗಿದೆ. ಬಿಎಸ್ಎಫ್, ಸೇನೆ ಮತ್ತು ಎಸ್‌ಎಸ್‌ಬಿ ಎಂಬ ಮೂರು ಹಂತದ ಭದ್ರತೆಯ ನಡುವೆಯೂ ಇಂತಹ ಕೃತ್ಯನಡೆದಿದೆ. ಈ ಘಟನೆ ಕಣಿವೆಯಲ್ಲಿನ ಪ್ರಸ್ತುತ ಭದ್ರತಾ ನಿಯೋಜನೆಯ ಉದ್ದೇಶ, ದಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.‌

ADVERTISEMENT

ಈ ಸಂಬಂಧ ಕೊಕೊಮಿ, ಬಿಷ್ಣುಪುರ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಸಭೆ ನಡೆಸಿದೆ. ಬಳಿಕ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಡಿಜಿಪಿ ಎಲ್.ಕೈಲುನ್ ಮತ್ತು ಐಜಿಪಿ ಕೆ.ಕಬೀಬ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಭದ್ರತಾ ಕಾರ್ಯತಂತ್ರದ ಕುರಿತು ಸಂವಾದ ನಡೆಸಿದೆ. ಈ ವೇಳೆ ಇಂಫಾಲ್‌ ಕಣಿವೆಯ ಹೊರವಲಯದಲ್ಲಿರುವ ಕೃಷಿ ಪ್ರದೇಶವನ್ನು ಅಧಿಕೃತವಾಗಿ 'ರೈತ ಸುರಕ್ಷತಾ ವಲಯ' ಹಾಗೂ 'ಶಸ್ತ್ರಾಸ್ತ್ರ ನಿಷೇಧ ವಲಯ ' ಎಂದು ಘೋಷಿಸುವಂತೆ ಆಗ್ರಹಿಸಿದೆ.

ಗುರುವಾರ ಮಧ್ಯಾಹ್ನ ಬಿಷ್ಣುಪುರ ಜಿಲ್ಲೆಯ ಫುಬಲಾ ಗ್ರಾಮದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಗುಂಪಿನ ಮೇಲೆ ಹತ್ತಿರದ ಗುಡ್ಡಗಾಡು ಪ್ರದೇಶಗಳಿಂದ ಗುಂಡಿನ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ನಿಂಗ್‌ತೌಜಮ್‌ ಬಿರೇನ್‌ ಎಂಬ ರೈತ ತೀವ್ರವಾಗಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.