ADVERTISEMENT

ತನಿಖೆಯಲ್ಲಿನ ಪ್ರಗತಿ: ವರದಿ ಸಲ್ಲಿಸಲು NIAಗೆ ಮಣಿಪುರ ಹೈಕೋರ್ಟ್‌ ಸೂಚನೆ

ಕಳೆದ ವರ್ಷ ಮೈತೇಯಿ ಸಮುದಾಯದ 6 ಮಂದಿ ಹತ್ಯೆ ಪ್ರಕರಣ

ಪಿಟಿಐ
Published 8 ಜುಲೈ 2025, 14:44 IST
Last Updated 8 ಜುಲೈ 2025, 14:44 IST
-
-   

ಇಂಫಾಲ್‌: ರಾಜ್ಯದ ಜಿರಿಬಾಮ್‌ ಜಿಲ್ಲೆಯಲ್ಲಿ ಕಳೆದ ವರ್ಷ ಮೈತೇಯಿ ಸಮುದಾಯದ ಆರು ಜನರ ಹತ್ಯೆ ಕುರಿತು ನಡೆಯುತ್ತಿರುವ ತನಿಖೆಯಲ್ಲಿನ ಪ್ರಗತಿ ಕುರಿತಂತೆ ‘ವಿಸ್ತೃತ ವರದಿ’ಯನ್ನು ಸಲ್ಲಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ಮಣಿಪುರ ಹೈಕೋರ್ಟ್‌ ನಿರ್ದೇಶನ ನೀಡಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿ, ಆರೋಪಪಟ್ಟಿಯನ್ನು ಸಲ್ಲಿಸದೇ ಇದ್ದಲ್ಲಿ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಅಹಂತೆಮ್ ಬಿಮಲ್ ಸಿಂಗ್‌ ಅವರು ಇದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ಹೇಳಿದೆ.

ಸೋರಮ್‌ ತೆಕೇಂದ್ರಜಿತ್‌ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

ADVERTISEMENT

ಕಳೆದ ವರ್ಷ ನವೆಂಬರ್‌ 11ರಂದು ಜಿರಿಬಾಮ್‌ ಜಿಲ್ಲೆಯ ಬೊರೊಬೆಕ್ರಾ ಪ್ರದೇಶದಲ್ಲಿ ಕುಕಿ ಹಮರ್ ಬಂಡುಕೋರರು ಮೈತೇಯಿ ಸಮುದಾಯಕ್ಕೆ ಸೇರಿದ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದರು. 

ವಿಚಾರಣೆ ವೇಳೆ, ಪ್ರಕರಣ ಕುರಿತ ತನಿಖೆಯಲ್ಲಿ ಪ್ರಗತಿ ಕಂಡುಬಂದಿಲ್ಲ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

‘ಘಟನೆ ನಡೆದ ದಿನವೇ ಸಂಬಂಧಪಟ್ಟ ಪ್ರಾಧಿಕಾರವು ಎಫ್‌ಐಆರ್ ದಾಖಲಿಸಿದೆ. ಆದರೆ, ಈ ವರೆಗೂ ತನಿಖೆಯಲ್ಲಾದ ಪ್ರಗತಿ ಕುರಿತು ಎನ್‌ಐಎ ವರದಿ ಸಲ್ಲಿಸಿಲ್ಲ. ಆರೋಪಪಟ್ಟಿಯನ್ನೂ ದಾಖಲಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.