
ಇಂಫಾಲ್: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ಹೊಸ ಸರ್ಕಾರ ರಚನೆಯಾಗುತ್ತಿರುವ ನಡುವೆಯೇ ಇಲ್ಲಿನ ಕೆಲವು ಕುಕಿ ಸಂಘಟನೆಗಳು ತಮ್ಮ ಸಮುದಾಯದ ಶಾಸಕರು ಹೊಸ ಸರ್ಕಾರದ ರಚನೆಯಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿವೆ.
ಜತೆಗೆ ಚುರಾಚಾಂದ್‌ಪುರದಲ್ಲಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದ್ದು, ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿವೆ.
ಬಿಜೆಪಿ ನಾಯಕ, ಮೈಥೇಯಿ ಸಮುದಾಯದ ಖೇಮಚಂದ್ ಸಿಂಗ್ ಅವರು ಬುಧವಾರ ಮಣಿಪುರದ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣಚವನ ಸ್ವೀಕರಿಸಿದರು. ಅಲ್ಲದೇ, ಕುಕಿ ಸಮುದಾಯದ ನಾಯಕಿ ನೆಮ್ಚಾ ಕಿಪ್ಗೆನ್ ಕೂಡ ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದಾಗ್ಯೂ, ಕುಕಿ ಸಮುದಾಯದ ಕೆಲವು ಸಂಘಟನೆಗಳು ಸರ್ಕಾರ ರಚನೆಗೆ ಸಮ್ಮತಿಸದೇ, ಸಮುದಾಯಕ್ಕೆ ಪ್ರತ್ಯೇಕ ಆಡಳಿತ ಬೇಕೆಂದು ಒತ್ತಾಯಿಸಿವೆ.
ಚುರಾಚಾಂದ್‌ಪುರದ ಸ್ಥಳೀಯ ಬುಡಕಟ್ಟು ಸಂಘಟನೆಯಾದ ಜಾಯಿಂಟ್ ಫೋರಂ ಆಫ್ ಸೆವೆನ್ (ಜೆಎಫ್7) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಕುಕಿ ಬಹುಸಂಖ್ಯಾತ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಸಲು ಕರೆ ನೀಡಿದೆ. ಜತೆಗೆ ಪ್ರತಿಭಟನೆಯಲ್ಲಿ ಕುಕಿ ಸಮುದಾಯದ ಎಲ್ಲರೂ ಭಾಗವಹಿಸಬೇಕೆಂದೂ ಕೋರಿದೆ.
ಸಮುದಾಯದ ಸಂಘಟನೆಗಳು ಒಟ್ಟಾಗಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ವಿರೋಧಿಸಿ ಸಮುದಾಯದ ಯಾವುದೇ ನಾಯಕ ವೈಯಕ್ತಿಕ ನಿರ್ಧಾರ ತೆಗದುಕೊಂಡರೆ ಅದನ್ನು ಸಮುದಾಯಕ್ಕೆ ಎಸಗಿದ ದ್ರೋಹ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗುವ ಪರಿಣಾಮಗಳಿಗೆ ಸಂಘಟನೆಗಳು ಹೊಣೆಯಾಗುವುದಿಲ್ಲ ಎಂದು ಕುಕಿ ಮಂಡಳಿ ತಿಳಿಸಿದೆ.
ಸಮುದಾಯದ ಕೆಲವು ಬಂಡುಕೋರ ಗುಂಪುಗಳು ಕೂಡ ತಮ್ಮ ಸಮುದಾಯದ ಶಾಸಕರು ಸರ್ಕಾರ ರಚನೆಯಲ್ಲಿ ಭಾಗಿಯಾಗಬಾರದು ಎಂದು ಎಚ್ಚರಿಸಿವೆ. ಬುಧವಾರ ರಾತ್ರಿಯೂ ನೆಮ್ಚಾ ಕಿಪ್ಗೆನ್ ಅವರು ಉಪ ಮುಖ್ಯಮಂತ್ರಿ ಆಗಿರುವುದನ್ನು ಖಂಡಿಸಿ ಪ್ರತಿಭಟನಕಾರರು ರಸ್ತೆಗಳ ನಡುವೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.