
ಇಂಫಾಲ್/ ಚುರಚಂದಪುರ: ಕುಕಿ–ಜೋ ಬುಡಕಟ್ಟು ಜನರಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸಬೇಕೆಂದು ಆಗ್ರಹಿಸಿ ಮಣಿಪುರದ ಹಲವು ಜಿಲ್ಲೆಗಳಲ್ಲಿ ಬುಧವಾರ ಈ ಸಮುದಾಯಗಳಿಂದ ಪ್ರತಿಭಟನಾ ರ‍್ಯಾಲಿ ನಡೆಯಿತು.
ಚುರಚಾಂದಪುರದ ಲಮ್ಕಾ ಪಬ್ಲಿಕ್ ಶಾಲಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸ್ಮರಣಾ ಗೋಡೆಯವರೆಗಿನ ಮೂರು ಕಿ.ಮೀ.ವರೆಗೂ ಪ್ರತಿಭಟನಕಾರರು ರ‍್ಯಾಲಿ ನಡೆಸಿದರು.
ಕಣಿವೆ ರಾಜ್ಯದಲ್ಲಿ ಕುಕಿ ಮತ್ತು ಜೋ ಸಮುದಾಯದವರು ಹೆಚ್ಚಿರುವ ಪ್ರದೇಶದಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸಲು ಕೇಂದ್ರ ಸರ್ಕಾರ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜೋ ಸಮುದಾಯ ಒಕ್ಕೂಟದ ಸಂಚಾಲಕ ಆಲ್ಬರ್ಟ್ ರೆಂತ್ಲೀ ಮಾತನಾಡಿ, ‘ಕೇಂದ್ರಕ್ಕೆ ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ದೂರಿದರು.
ಕಾಂಗ್ಪೊಕ್ಪಿ, ಫರ್ಜಾಲ್, ತೆಂಗನೂಪಾಲ್, ಸಾಯಿಕುಲ್, ಜಂಪ್ಯುಟ್ಲಾಂಗ್‌ನಲ್ಲಿ ರ‍್ಯಾಲಿ ನಡೆಯಿತು. ಚುರಚಾಂದಪುರ, ಬಿಷ್ಣುಪುರ, ಕಾಂಗ್ಪೊಕ್ಪಿ ಹಾಗೂ ಇಂಫಾಲ್ ಪೂರ್ವ ಜಿಲ್ಲೆಯ ಅಂತರ ಜಿಲ್ಲಾ ಗಡಿ ಪ್ರದೇಶ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆಯಾಗಿ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.