ADVERTISEMENT

ಮಣಿಪುರ ಭೂಕುಸಿತ: 20 ಮೃತದೇಹ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 15:35 IST
Last Updated 1 ಜುಲೈ 2022, 15:35 IST
   

ಇಂಫಾಲ: ಮಣಿಪುರದ ನೊನಿ ಜಿಲ್ಲೆಯ ರೈಲ್ವೆ ಕಾಮಗಾರಿ ಪ್ರದೇಶದಲ್ಲಿ ಭಾರಿ ಭೂಕುಸಿತದಿಂದಾಗಿ ಅವಶೇಷಗಳ ಅಡಿ ಸಿಲುಕಿದ್ದ 20 ಮೃತದೇಹಗಳನ್ನು ಶುಕ್ರವಾರ ಹೊರಕ್ಕೆ ತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಮೂರು ತಂಡ, ಸ್ಥಳೀಯ ಆಡಳಿತ, ರಾಜ್ಯ ಪೊಲೀಸ್‌, ಭಾರತೀಯ ಸೇನೆ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಅವಶೇಷಗಳ ಅಡಿ ಸಿಲುಕಿದ್ದ 20 ಮೃತದೇಹಗಳನ್ನು ಹೊರಕ್ಕೆ ತೆಗೆದಿವೆ. ಎನ್‌ಡಿಆರ್‌ಎಫ್ ತಂಡ ಆಗಮನಕ್ಕೂ ಮುನ್ನ ಗಾಯಗೊಂಡಿದ್ದ 18 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನೂ ಹಲವು ಜನರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.

ADVERTISEMENT

ಅಸ್ಸಾಂ ಪ್ರವಾಹ: ಮತ್ತೆ ಎಂಟು ಮಂದಿ ಸಾವು (ಗುವಾಹಟಿ ವರದಿ)

ಅಸ್ಸಾಂನಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದ್ದು, ಶುಕ್ರವಾರ ಮತ್ತೆ ಎಂಟು ಜನರು ಮೃತಪಟ್ಟಿದ್ದಾರೆ. 29 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಚಾರ್ ಜಿಲ್ಲಾ ಕೇಂದ್ರ ಸಿಲ್ಚಾರ್‌ನ ಬಹುತೇಕ ಭಾಗಗಳು ಇನ್ನೂ ಜಲಾವೃತವಾಗಿವೆ. ಈ ವರ್ಷ ಪ್ರವಾಹ ಮತ್ತು ಭೂಕುಸಿತದಿಂದ ಈವರೆಗೂ 159 ಮಂದಿ ಮೃತಪಟ್ಟಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ‍ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.

ಪ್ರವಾಹದಿಂದ 2,608 ಹಳ್ಳಿಗಳು, 75 ಕಂದಾಯ ವೃತ್ತಗಳು ಬಾಧಿತವಾಗಿದ್ದು, 3,05,565 ಜನರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.