ADVERTISEMENT

ವ್ಯಕ್ತಿ ಮೇಲೆ ಗುಂಪು ಹಲ್ಲೆ; ಮೂಕ ಪ್ರೇಕ್ಷಕರಾದ ಪೊಲೀಸ್: ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 13:17 IST
Last Updated 17 ಸೆಪ್ಟೆಂಬರ್ 2018, 13:17 IST
ಚಿತ್ರ ಕೃಪೆ: NEFIS
ಚಿತ್ರ ಕೃಪೆ: NEFIS   

ಗುವಾಹಟಿ: ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸುತ್ತಿರುವಾಗ ಸಬ್‌ಇನ್‌ಸ್ಪೆಕ್ಟರ್‌ ಸೇರಿದಂತೆ ನಾಲ್ವರು ಪೊಲೀಸರು ಮೂಕ ಪ್ರೇಕ್ಷಕರಾಗಿ ನೋಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪಶ್ಚಿಮ ಇಂಫಾಲ್‍ನ ಥರೋಯಿಜಾಮ್ ಎಂಬಲ್ಲಿ ಗುರುವಾರ ತೌಬಾಲ್ ಜಿಲ್ಲೆಯ 26ರ ಹರೆಯದ ಫರೂಖ್ ಖಾನ್ ಎಂಬಾತನ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು.ಆವೇಳೆ ಅಲ್ಲಿ ನಾಲ್ವರು ಪೊಲೀಸರು ಉಪಸ್ಥಿತರಿದ್ದರೂ ಅದನ್ನು ತಡೆಯಲಿಲ್ಲ. ತೀವ್ರ ಗಾಯಗೊಂಡ ಫರೂಖ್ ಖಾನ್ ಅಸು ನೀಗಿದ್ದಾರೆ ಎಂದು ಪಶ್ಚಿಮ ಇಂಫಾಲ್‍ನ ಹಿರಿಯ ಪೊಲೀಸ್ ಜೋಗೇಶ್ವರ್ ಹವೊಬಿ ಜಮ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಬೈಕ್ ಕದ್ದಿರುವ ಆರೋಪದಲ್ಲಿ ಫರೂಖ್ ಖಾನ್ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.ಖಾನ್ ಜತೆಗೆ ಇದ್ದ ಇಬ್ಬರು ವ್ಯಕ್ತಿಗಳು ಓಡಿ ಪರಾರಿಯಾದಾಗ ಖಾನ್ ಬಳಸಿದ್ದ ಕಾರಿಗೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ.
ಈ ಪ್ರಕರಣದಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್ ಪೊಲೀಸ್ ಪಡೆಯ ಸಿಬ್ಬಂದಿ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದೆ.

ADVERTISEMENT

ಈ ಗುಂಪು ಹಲ್ಲೆಯನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.ಈ ಬಗ್ಗೆ ತನಿಖೆ ನಡೆಸಿ ಸೆಪ್ಟೆಂಬರ್ 22ರಂದು ವರದಿ ಸಲ್ಲಿಸುವಂತೆ ರಾಜ್ಯ ಮಹಾ ನಿರ್ದೇಶಕರಿಗೆ ಮಣಿಪುರ ಮಾನವ ಹಕ್ಕುಗಳ ಆಯೋಗ ನಿರ್ದೇಶಿಸಿದೆ.

ಈ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತನಿಖೆ ನಡೆಸುವಂತೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.