ADVERTISEMENT

ಮಣಿಪುರದಲ್ಲಿ ರಾಜಕೀಯ ಬೆಳವಣಿಗೆ | ಸರ್ಕಾರ ರಚನೆಗೆ 44 ಶಾಸಕರ ಬೆಂಬಲ: BJP

ಪಿಟಿಐ
Published 28 ಮೇ 2025, 9:43 IST
Last Updated 28 ಮೇ 2025, 9:43 IST
<div class="paragraphs"><p>ತೊಕ್ಚೊಂ ರಾಧೇಶ್ಯಾಮ್ ಸಿಂಗ್</p></div>

ತೊಕ್ಚೊಂ ರಾಧೇಶ್ಯಾಮ್ ಸಿಂಗ್

   

ಇಂಫಾಲ್‌: ಮಣಿಪುರದಲ್ಲಿ ಹೊಸ ಸರ್ಕಾರ ರಚನೆಗೆ 44 ಶಾಸಕರ ಬೆಂಬಲವಿದೆ ಎಂದು ಬಿಜೆಪಿ ಶಾಸಕ ತೊಕ್ಚೊಂ ರಾಧೇಶ್ಯಾಮ್ ಸಿಂಗ್ ಅವರು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಬುಧವಾರ ತಿಳಿಸಿದ್ದಾರೆ.  

ರಾಧೇಶ್ಯಾಮ್ ಹಾಗೂ ಇತರ ಒಂಬತ್ತು ಶಾಸಕರು ರಾಜಭವನಕ್ಕೆ ಭೇಟಿ ನೀಡಿ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಿದರು.

ADVERTISEMENT

‘ಜನರ ಆಶಯದಂತೆ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಿದ್ದು, 44 ಶಾಸಕರ ಬೆಂಬಲ ಹೊಂದಿದೆ. ಇದನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರ ರಚನೆಯ ಸಮಸ್ಯೆಗಿರುವ ಪರಿಹಾರವನ್ನೂ ರಾಜ್ಯಪಾಲರೊಂದಿಗೆ ಚರ್ಚಿಸಲಾಗಿದೆ. ರಾಜ್ಯದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲ ಅಜಯ್‌ ಕುಮಾರ್ ಭಲ್ಲಾ ತಿಳಿಸಿದ್ದಾರೆ’ ಎಂದು ವಿವರಿಸಿದ್ದಾರೆ.

’ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತಿರಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಧೇಶ್ಯಾಮ್, ‘ಬಿಜೆಪಿಯ ಕೇಂದ್ರ ನಾಯಕತ್ವ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ. ಈ ನಡುವೆ ವಿಧಾನಸಭಾಧ್ಯಕ್ಷ ಸತ್ಯಬ್ರತ ಅವರು ಪ್ರತಿ ಶಾಸಕರನ್ನು ವೈಯಕ್ತಿಕವಾಗಿ ಮತ್ತು ಎಲ್ಲಾ 44 ಶಾಸಕರನ್ನೂ ಒಟ್ಟಿಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಸರ್ಕಾರ ರಚನೆಗೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ’ ಎಂದು ತಿಳಿಸಿದ್ದಾರೆ.

ರಾಜ್ಯದ ಜನರು ತೀರಾ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೋವಿಡ್‌ನಲ್ಲಿ ಎರಡು ವರ್ಷ ಕಳೆಯಿತು. ಮುಂದಿನ ಎರಡು ವರ್ಷ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಕಳೆಯಿತು. ಎನ್. ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರ ಕಳೆದ ಫೆಬ್ರುವರಿಯಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. 

ಒಟ್ಟು 60 ಶಾಸಕರ ಮಣಿಪುರ ವಿಧಾನಸಭೆಯಲ್ಲಿ ಸದ್ಯ 59 ಶಾಸಕರಿದ್ದಾರೆ. ಒಬ್ಬರು ಶಾಸಕರು ಮೃತಪಟ್ಟಿದ್ದಾರೆ. ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ 32 ಮೈತೇಯಿ ಶಾಸಕರು, ಮೂವರು ಮಣಿಪುರ ಮುಸ್ಲಿಂ ಶಾಸಕರು ಮತ್ತು ಒಂಬತ್ತು ನಾಗ ಶಾಸಕರನ್ನು ಒಳಗೊಂಡು 44 ಶಾಸಕರು ಸರ್ಕಾರ ರಚನೆಗೆ ಒಲವು ತೋರಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್‌ನ ಐದು ಶಾಸಕರು ಇದ್ದು, ಅವರೆಲ್ಲರೂ ಮೈತೇಯಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಳಿದ ಹತ್ತು ಶಾಸಕರು ಕುಕಿ ಸಮುದಾಯಕ್ಕೆ ಸೇರಿದ್ದಾರೆ. ಇವರಲ್ಲಿ ಏಳು ಶಾಸಕರು ಬಿಜೆಪಿ ಟಿಕೆಟ್‌ ಪಡೆದು ಕಳೆದ ಚುನಾವಣೆ ಎದುರಿಸಿ ಗೆದ್ದಿದ್ದರು. ಇವರಲ್ಲಿ ಇಬ್ಬರು ಕುಕಿ ಸಮುದಾಯಕ್ಕೆ ಸೇರಿದವರು ಹಾಗೂ ಒಬ್ಬರು ಪಕ್ಷೇತರ ಶಾಸಕರಾಗಿದ್ದಾರೆ.

2023ರ ಮೇನಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಸಂಘರ್ಷ ನಡೆದು 250ಕ್ಕೂ ಹೆಚ್ಚು ಜನ ಮೃತಪಟ್ಟು ಹಲವರು ನೆಲೆ ಕಳೆದುಕೊಂಡರು. ರಾಜ್ಯದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿತ್ತು. ಘಟನೆ ಖಂಡಿಸಿದ ಮೈತೇಯಿ ಸಮುದಾಯವು, ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಭದ್ರತಾ ಸಲಹೆಗಾರರ ರಾಜೀನಾಮೆಗೆ ಒತ್ತಾಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.