
ಜೈಪುರ: ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯ ನೋಡಲು ಅಹಮದಾಬಾದ್‌ಗೆ ಹೋಗುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಲಭೆ ಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಆಗಲಿಲ್ಲವೇ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಪ್ರಶ್ನಿಸಿದ್ದಾರೆ
ರಾಜಸ್ಥಾನ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಮೋದಿ ನಾಯಕತ್ವದಲ್ಲಿ ಬಿಜೆಪಿ ಹೇಗೆ ಶ್ರೀಮಂತ ಪಕ್ಷವಾಗಿ ಹೊರವೊಮ್ಮಿದೆ ಎಂಬುವುದನ್ನು ಅವರನ್ನೇ( ನರೇಂದ್ರ ಮೋದಿ) ಪ್ರಶ್ನಿಸಬೇಕು' ಎಂದರು.
'ಮಣಿಪುರದಲ್ಲಿ ಗಲಭೆ ಪ್ರಾರಂಭವಾಗಿ ಸುಮಾರು ಏಳು ತಿಂಗಳು ಕಳೆದರೂ, ಈವರೆಗೂ ಮೋದಿ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ವಿಶ್ವಕಪ್ ಪಂದ್ಯ ವೀಕ್ಷಿಸಲು ತೆರಳಿದ್ದರು' ಎಂದು ಟೀಕಿಸಿದ್ದಾರೆ.
'ಭಾರತ ಕ್ರಿಕೆಟ್ ತಂಡದವರು ಅವರ ಕಠಿಣ ಪರಿಶ್ರಮದಿಂದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಿದರು. ಭಾರತ ವಿಶ್ವಕಪ್ ಗೆದ್ದರೆ ಅದರ 'ಕ್ರೆಡಿಟ್' ಪಡೆಯಲು ಮೋದಿ ಕ್ರೀಡಾಂಗಾಣಕ್ಕೆ ತೆರಳಿದ್ದರು. ಪ್ರಧಾನಿಯಾಗಿ ಪಂದ್ಯ ವೀಕ್ಷಣೆಗೆ ಹೋಗುವುದು ಹೆಮ್ಮೆ ಹಾಗೂ ಗೌರವ ಸಂಕೇತವಿರಬಹುದು. ಆದರೆ ಮಣಿಪುರ ವಿಚಾರದಿಂದ ದೂರ ಉಳಿದಿದ್ದು ಏಕೆ' ಎಂದು ಪ್ರಿಯಾಂಕಾ ಮತ್ತೆ ಪ್ರಶ್ನಿಸಿದ್ದಾರೆ.
ಉದ್ಯಮಿಗಳ ಸಾಲಮನ್ನಾ ಮಾಡುವುದಕ್ಕೆ ಆದ್ಯತೆ ನೀಡುವ ಮೋದಿ ಸರ್ಕಾರ, ಬಡವರ ಬಗ್ಗೆ ಚಿಂತಿಸುತ್ತಿಲ್ಲ ಎಂದೂ ಕಿಡಿಕಾರಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆ ನವೆಂಬರ್ 3ರಂದು ನಡೆಯಲಿದ್ದು, ಡಿಸೆಂಬರ್ 3ಕ್ಕೆ ಮತ ಏಣಿಕೆ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.