ಚುರಚಾಂದಪುರ/ಇಂಫಾಲ್: ಗಲಭೆ, ಹಿಂಸಾಚಾರವನ್ನು ದೂರವಿಡುವಂತೆ ಮಣಿಪುರದ ವಿವಿಧ ಸಂಘಟನೆಗಳಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲ ಸಂಘಟನೆಗಳು ಶಾಂತಿ ಮಾರ್ಗ ಕಂಡುಕೊಳ್ಳಬೇಕು ಎಂದು ಶನಿವಾರ ಹೇಳಿದರು.
‘ಶಾಂತಿ ಪಥದಲ್ಲಿ ಸಾಗಿದರೆ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದ ಅವರು, ‘ಸಂಘರ್ಷ ಪೀಡಿತ ರಾಜ್ಯವನ್ನು ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಸಂಕೇತವನ್ನಾಗಿ ಮಾಡುವ ಗುರಿಯತ್ತ ಮುನ್ನಡೆಸಲು ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ’ ಎಂದು ಪ್ರತಿಪಾದಿಸಿದರು.
2023ರ ಮೇ ತಿಂಗಳಿನಲ್ಲಿ ಜನಾಂಗೀಯ ಗಲಭೆಯಿಂದ ತತ್ತರಿಸಿದ್ದ ರಾಜ್ಯಕ್ಕೆ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಭೇಟಿ ನೀಡಿ, ಚುರಚಾಂದಪುರ ಮತ್ತು ಇಂಫಾಲ್‌ನಲ್ಲಿ ಅಂದಾಜು ₹8,500 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಎರಡೂ ಕಡೆಯೂ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಗಲಭೆ ಪೀಡಿತ ರಾಜ್ಯಕ್ಕೆ ಎರಡು ವರ್ಷಗಳಿಂದ ಭೇಟಿ ನೀಡದ ಕಾರಣಕ್ಕಾಗಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ಎದುರಿಸಿದ್ದ ಮೋದಿ ಅವರು, ‘ಮಣಿಪುರದ ಜನರೊಂದಿಗೆ ಕೇಂದ್ರ ಸರ್ಕಾರ ದೃಢವಾಗಿ ನಿಂತಿದ್ದು, ಶಾಂತಿ ಸ್ಥಾಪನೆ ಮತ್ತು ಪ್ರಗತಿಗೆ ಸಂಬಂಧಿಸಿದಂತೆ ನಡೆಸಿದ ಪ್ರಯತ್ನಗಳು ಫಲನೀಡುತ್ತಿವೆ’ ಎಂದು ತಿಳಿಸಿದರು.
‘ಇಲ್ಲಿನ ಜನರ ಕನಸುಗಳನ್ನು ನನಸು ಮಾಡಲು ಮತ್ತು ಮಕ್ಕಳ ಭವಿಷ್ಯವನ್ನು ರಕ್ಷಿಸಲು, ಶಾಂತಿ ನೆಲಸುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ಎಲ್ಲ ಸಂಘಟನೆಗಳು ಮುಂದಾಗಬೇಕು’ ಎಂದು ಅವರು ಮನವಿ ಮಾಡಿದರು.
‘ಮಣಿಪುರವು ಭರವಸೆ ಮತ್ತು ಆಕಾಂಕ್ಷೆಗಳ ಭೂಮಿ. ಆದರೆ, ಈ ಸುಂದರ ಪ್ರದೇಶದ ಮೇಲೆ ಹಿಂಸಾಚಾರ ತನ್ನ ನೆರಳನ್ನು ಬೀರಿರುವುದು ದುರದೃಷ್ಟಕರ’ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.
‘ಇಲ್ಲಿಗೆ ಬರುವುದಕ್ಕೂ ಮುನ್ನ ನಾನು ಪರಿಹಾರ ಶಿಬಿರದಲ್ಲಿ ಸಂತ್ರಸ್ತರನ್ನು ಭೇಟಿಯಾದೆ. ಅವರ ಜತೆ ಮಾತನಾಡಿದ ಬಳಿಕ, ಮಣಿಪುರದಲ್ಲಿ ಹೊಸ ಭರವಸೆ ಮತ್ತು ವಿಶ್ವಾಸ ಉದಯಿಸುತ್ತಿದೆ ಎಂಬುದು ಮನವರಿಕೆಯಾಗಿದೆ’ ಎಂದರು.
ಪರಿಹಾರದ ಶಿಬಿರದಲ್ಲಿ ನೆಲಸಿರುವ ಸಂತ್ರಸ್ತರ ಮಕ್ಕಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚುರಚಾಂದಪುರದಲ್ಲಿ ಶನಿವಾರ ಮಾತನಾಡಿದರು
‘ಎಲ್ಲಿಯಾದರೂ ಅಭಿವೃದ್ಧಿ, ಪ್ರಗತಿ ಮತ್ತು ಸಮೃದ್ಧಿ ಬೇರೂರಲು ಶಾಂತಿಯುತ ವಾತಾವರಣ ಇರಬೇಕು. 11 ವರ್ಷಗಳಲ್ಲಿ ಈಶಾನ್ಯ ಭಾಗದಲ್ಲಿ ಅನೇಕ ಸಂಘರ್ಷ, ವಿವಾದಗಳನ್ನು ಪರಿಹರಿಸಲಾಗಿದೆ. ಈ ಮೂಲಕ ಜನರು ಶಾಂತಿ ಪಥವನ್ನು ಆಯ್ದುಕೊಂಡಿದ್ದು, ಅಭಿವೃದ್ದಿಗೆ ಒತ್ತು ನೀಡಿದ್ದಾರೆ’ ಎಂದು ಅವರು ಹೇಳಿದರು.
ಮಣಿಪುರದಲ್ಲಿ ವಿವಿಧ ಸಂಘಟನೆಗಳ ಜತೆ ಒಪ್ಪಂದಗಳಿಗಾಗಿ ಮಾತುಕತೆಗಳು ನಡೆದಿವೆ. ಈ ದಿಸೆಯಲ್ಲಿ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳು ಈಗ ಫಲ ನೀಡುತ್ತಿವೆ ಎಂದು ಅವರು ಹೇಳಿದರು.
ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ಸಂತ್ರಸ್ತರಾಗಿ ಪರಿಹಾರದ ಶಿಬಿರದಲ್ಲಿ ನೆಲಸಿರುವ ಜನರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಚುರಚಾಂದಪುರದಲ್ಲಿ ಶನಿವಾರ ಮಾತುಕತೆ ನಡೆಸಿದರು
ಮಣಿಪುರದ ಅಭಿವೃದ್ಧಿ, ಸಂತ್ರಸ್ತರ ಕುಟುಂಬಗಳ ಪುನರ್ವಸತಿ ಮತ್ತು ಶಾಂತಿ ಸ್ಥಾಪನೆಗೆ ಭಾರತ ಸರ್ಕಾರವು ಎಲ್ಲ ರೀತಿಯ ನೆರವು, ಬೆಂಬಲವನ್ನು ಮುಂದುವರಿಸುತ್ತದೆ ಎಂದು ಅವರು ವಿವರಿಸಿದರು.
ಪ್ರತಿಕೂಲ ಹವಾಮಾನದ ಕಾರಣ ಮೋದಿ ಅವರು ಚುರಚಾಂದಪುರದಿಂದ ಇಂಫಾಲ್‌ಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲಿಲ್ಲ. ಬದಲಿಗೆ ರಸ್ತೆ ಮಾರ್ಗದಲ್ಲಿ ಸಂಚರಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಜನರು ತ್ರಿವರ್ಣ ಧ್ವಜಗಳನ್ನು ಹಿಡಿದು ಅವರನ್ನು ಸ್ವಾಗತಿಸಿದರು.
ಮಣಿಪುರ ಜನಾಂಗೀಯ ಹಿಂಸಾಚಾರದ ಸಂತ್ರಸ್ತರು ಚುರಚಾಂದಪುರದಲ್ಲಿ ಪ್ರಧಾನಿ ಮೋದಿ ಅವರ ಬಳಿ ಶನಿವಾರ ತಮ್ಮ ನೋವು ತೋಡಿಕೊಂಡರು
ಯಾರೇ ಪ್ರಧಾನಿಯಾಗಲಿ ನೋವು ಮತ್ತು ಹಾನಿ ಸಂಭವಿಸಿದಾಗ ಅಲ್ಲಿಗೆ ಪ್ರಧಾನಿ ಭೇಟಿ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯ. ಆದರೆ ಮೋದಿ ಅವರು ಎರಡು ವರ್ಷಗಳ ಬಳಿಕ ಈ ಕಾರ್ಯವನ್ನು ಮಾಡುತ್ತಿದ್ದಾರೆಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಸಂಸದೆ
ಜನಾಂಗೀಯ ಹಿಂಸಾಚಾರದಿಂದ ಸ್ಥಳಾಂತರಗೊಂಡ ಕುಕಿ ಬುಡಕಟ್ಟು ಸಮುದಾಯ ಮತ್ತು ಮೈತೇಯಿ ಸಮುದಾಯದ ಸಂತ್ರಸ್ತರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂವಾದ ನಡೆಸಿದರು. ಇಂಫಾಲ್‌ನ ಐತಿಹಾಸಿಕ ಕಾಂಗ್ಲಾ ಕೋಟೆ ಸಂಕೀರ್ಣ ಮತ್ತು ಚುರಚಾಂದಪುರದ ಶಾಂತಿ ಮೈದಾನದಲ್ಲಿ ಮೋದಿ ಅವರು ಸಂತ್ರಸ್ತರ ಕುಟುಂಬದವರ ನೋವು ಆಲಿಸಿದರು.
ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಪುನರ್‌ಸ್ಥಾಪನೆಗೆ ಅಗತ್ಯ ಕಾರ್ಯಗಳನ್ನು ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬ ಭರವಸೆಯನ್ನು ಪ್ರಧಾನಿ ಅವರು ಈ ವೇಳೆ ನೀಡಿದರು ಎಂದು ಅಧಿಕಾರಿಗಳು ಹೇಳಿದರು.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಒಟ್ಟು 60000 ಜನರು ತಮ್ಮ ನೆಲೆಗಳನ್ನು ಕಳೆದುಕೊಂಡು ಸರ್ಕಾರದ ಪರಿಹಾರ ಶಿಬಿರಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ಪೈಕಿ ಸುಮಾರು 40000 ಜನರು ಕುಕಿ ಜೊ ಸಮುದಾಯಕ್ಕೆ ಸೇರಿದವರಾಗಿದ್ದರೆ 20000 ಜನರು ಮೈತೇಯಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಲ್ಲಿ ರಾಜ್ಯದ 260ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಈ ಹಿಂದೆ ‘ವೋಟ್ ಬ್ಯಾಂಕ್’ ರಾಜಕೀಯದಿಂದ ತೀವ್ರವಾಗಿ ನರಳಿದ್ದ ಈಶಾನ್ಯ ರಾಜ್ಯಗಳು ಈಗ ದೇಶದ ಪ್ರಗತಿಯ ಎಂಜಿನ್ ಆಗಿ ಪರಿವರ್ತನೆ ಆಗಿವೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. ಪ್ರಧಾನಿ ಆದ ಬಳಿಕ ಮಿಜೋರಾಂಗೆ ಎರಡನೇ ಬಾರಿ ಭೇಟಿ ನೀಡಿದ ಮೋದಿ ಅವರು ಅಂದಾಜು ₹9000 ಕೋಟಿ ಮೊತ್ತದ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಭಾರಿ ಮಳೆಯಿಂದಾಗಿ ಲಮ್ಮುವಲ್ ಮೈದಾನಕ್ಕೆ ತಲುಪಲು ಸಾಧ್ಯವಾಗದ ಕಾರಣ ಅವರು ಐಜ್ವಾಲ್ ಬಳಿಯ ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದ ವರ್ಚುವಲ್ ಆಗಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಐಜ್ವಾಲ್– ದೆಹಲಿ ನಡುವಿನ ಮೊದಲ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ವಿವಿಧ ರೈಲು ಹೆದ್ದಾರಿ ಮಾರ್ಗಗಳು ಇಂಧನ ಮತ್ತು ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಮೋದಿ ಹಸಿರು ನಿಶಾನೆ ತೋರಿದರು.
ಹಿಂಸಾಚಾರದಿಂದ ಸ್ಥಳಾಂತರಗೊಂಡ ಸಂತ್ರಸ್ತರ ಕುಟುಂಬಗಳಿಗೆ 7000 ಹೊಸ ಮನೆಗಳನ್ನು ನಿರ್ಮಿಸಲು ನೆರವು ನೀಡಲಾಗುವುದು
ಇತ್ತೀಚೆಗೆ ₹3000 ಕೋಟಿ ವಿಶೇಷ ಪ್ಯಾಕೇಜ್ ಅನುಮೋದಿಸಲಾಗಿದೆ. ಸಂತ್ರಸ್ತರ ನೆರವಿಗೆ ನಿರ್ದಿಷ್ಟವಾಗಿ ₹500 ಕೋಟಿ ನಿಗದಿಪಡಿಸಲಾಗಿದೆ
ಹಿಂದೆ ದೆಹಲಿಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಮಣಿಪುರಕ್ಕೆ ತಲುಪಲು ದಶಕಗಳೇ ಬೇಕಾಗುತ್ತಿತ್ತು. ಆದರೆ ಈಗ ತ್ವರಿತವಾಗಿ ತಲುಪುತ್ತಿವೆ. ಇದರ ಪರಿಣಾಮ ದೇಶದ ಇತರ ಭಾಗಗಳಂತೆ ಮಣಿಪುರ ಸಹ ಪ್ರಗತಿ ಪಥದತ್ತ ಸಾಗಿದೆ
ಹಿಂದೆ ಇಲ್ಲಿನ ಬೆಟ್ಟ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಉತ್ತಮ ಶಾಲೆ ಆಸ್ಪತ್ರೆಗಳು ಕನಸಾಗಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಚುರಚಾಂದಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ
ರಾಜ್ಯದಲ್ಲಿ ಎಂಟು ವರ್ಷಗಳ ಹಿಂದೆ ಕೊಳವೆ ನೀರಿನ ಸಂಪರ್ಕವನ್ನು ಕೇವಲ 30000 ಮನೆಗಳು ಪಡೆದಿದ್ದವು. ಈಗ 3.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.
ಮಣಿಪುರದ ಹೆಸರಿನಲ್ಲಿ ‘ಮಣಿ’ ಇದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಫಲವಾಗಿ ಇದು ಮುಂದಿನ ದಿನಗಳಲ್ಲಿ ಹೊಳೆಯುವ ‘ರತ್ನ’ವಾಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.