ADVERTISEMENT

PM ಮೋದಿ ಮಣಿಪುರ ಭೇಟಿ ಸಾಧ್ಯತೆ | ಕಣ್ಣೀರು ಬತ್ತಿಲ್ಲದ ಕಾರಣ ನರ್ತಿಸಲಾಗದು: ಕುಕಿ

ಪಿಟಿಐ
Published 10 ಸೆಪ್ಟೆಂಬರ್ 2025, 11:45 IST
Last Updated 10 ಸೆಪ್ಟೆಂಬರ್ 2025, 11:45 IST
<div class="paragraphs"><p>ಮಣಿಪುರ ಸಂಘರ್ಷದಲ್ಲಿ ಮೃತಪಟ್ಟವರಿಗೆ ಮೇಣದ ಬತ್ತಿ ಹಿಡಿದು ನಮನ ಸಲ್ಲಿಸಿದರು (ಸಂಗ್ರಹ ಚಿತ್ರ)</p></div>

ಮಣಿಪುರ ಸಂಘರ್ಷದಲ್ಲಿ ಮೃತಪಟ್ಟವರಿಗೆ ಮೇಣದ ಬತ್ತಿ ಹಿಡಿದು ನಮನ ಸಲ್ಲಿಸಿದರು (ಸಂಗ್ರಹ ಚಿತ್ರ)

   

ಇಂಫಾಲ್: ‘ನಮ್ಮ ಶೋಕ ಈಗಲೂ ಕೊನೆಗೊಂಡಿಲ್ಲ. ನಮ್ಮ ಕಣ್ಣೀರು ಇನ್ನೂ ಬತ್ತಿಲ್ಲ. ನಮ್ಮ ಗಾಯಗಳು ಈಗಲೂ ಗುಣವಾಗಿಲ್ಲ. ಹೀಗಾಗಿ ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಸಂಭ್ರಮಿಸಿ ನರ್ತಿಸಲು ನಮ್ಮಿಂದ ಆಗುವುದಿಲ್ಲ’ ಎಂದು ಮಣಿಪುರದ ವಿದ್ಯಾರ್ಥಿ ಸಂಘಟನೆಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆ. 13ರಂದು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಕುರಿತು ಸಂಘಟನೆ ಪ್ರತಿಕ್ರಿಯಿಸಿದೆ. ಜತೆಗೆ ಇನ್ನೂ ಹಲವು ಸಂಸ್ಥೆಗಳು ಹೇಳಿಕೆ ನೀಡಿವೆ.

ADVERTISEMENT

‘ಜನಾಂಗೀಯ ಹಿಂಸಾಚಾರಕ್ಕೆ ಒಳಗಾಗಿರುವ ರಾಜ್ಯಕ್ಕೆ ಪ್ರಧಾನಿ ಭೇಟಿ ಸ್ವಾಗತಾರ್ಹ. ಆದರೆ ಕಣ್ಣುಗಳು ತೇವವಾಗಿರುವಾಗ ಅವರನ್ನು ಸ್ವಾಗತಿಸಲು ನರ್ತಿಸಲು ಸಾಧ್ಯವಿಲ್ಲ. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಅವರು ಜನಾಂಗೀಯ ಹಿಂಸಾಚಾರಕ್ಕೆ ತುತ್ತಾದವರೊಂದಿಗೆ ಸಮಾಲೋಚನೆ ನಡೆಸಬೇಕು’ ಎಂದು ಕುಕಿ–ಝೊ ಸಮುದಾಯ ಪ್ರತಿನಿಧಿಸುವ ವಿವಿಧ ಸಂಘಟನೆಗಳ ಮುಖಂಡರು ಹೇಳಿದ್ದಾರೆ. 

‘ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿಯನ್ನು ಸ್ವಾಗತಿಸಬೇಕು. ಆದರೆ ಕುಕಿ–ಝೊ ಜನರ ಸಂಘಟಿತ ಆಶೋತ್ತರಗಳಿಗೆ ನ್ಯಾಯ ಸಿಗಬೇಕು. ತಾತ್ಕಾಲಿಕ ಪರಿಹಾರ ಕ್ರಮಗಳಿಂದ ಯಾವುದೇ ಪ್ರಯೋಜನವಾಗದು. ಏನೇ ಪರಿಹಾರ ನೀಡುವುದಿದ್ದರೂ ಅದು ಸ್ಪಷ್ಟವಾಗಿ ಮತ್ತು ಖಾತ್ರಿ ಇರುವಂಥದ್ದಾಗಬೇಕು’ ಎಂದು ಕುಕಿ ಇಂಪಿ ಮಣಿಪುರ ಸಂಘಟನೆ ಒತ್ತಾಯಿಸಿದೆ.

ಮೈತೇಯಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಇಂಫಾಲ್‌ ಕಣಿವೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆಗಳಿದ್ದು, ಇದು ಸಾಕಷ್ಟು ಅವಕಾಶಗಳನ್ನು ತೆರೆಯಲಿದೆ ಎಂದು ಮೈತೇಯಿ ಸಮುದಾಯ ಹೇಳಿದೆ.

‘ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ದೂರು ದುಮ್ಮಾನಗಳನ್ನು ಹಂಚಿಕೊಳ್ಳಲು ಇದೊಂದು ಉತ್ತಮ ಸಮಯ ಹಾಗೂ ಜನಾಂಗೀಯ ಸಂಘರ್ಷದಲ್ಲಿ ಮುಗ್ದ ಗ್ರಾಮಸ್ಥರು ಹೇಗೆ ತೊಂದರೆಗೆ ಸಿಲುಕಿದರು ಎಂಬುದನ್ನೂ ಅವರು ಕೇಳಿ ಅರಿಯಬೇಕು’ ಎಂದು ಇಂಫಾಲ್ ಪೂರ್ವ ಜಿಲ್ಲೆಯ ಗ್ರಾಮಸ್ಥ ಸೋಯ್ಬಮ್‌ ರೀಗನ್‌ ಹೇಳಿದ್ದಾರೆ.

‘ಪ್ರಧಾನಿ ಭೇಟಿ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಲು ಮೈತೇಯಿ ಸಮುದಾಯಕ್ಕೆ ಅವಕಾಶ ನೀಡಬೇಕು ಮತ್ತು ಭದ್ರತೆಯನ್ನೂ ಒದಗಿಸಬೇಕು’ ಎಂದು ಮಹಿಳಾ ಸಂಘಟನೆ ಆಗ್ರಹಿಸಿದೆ.

2023ರ ಮೇನಲ್ಲಿ ಆರಂಭಗೊಂಡ ಜನಾಂಗೀಯ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನ ಮೃತಪಟ್ಟು ಸಾವಿರಾರು ಜನ ಮನೆ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ರಾಜ್ಯದ ಚುನಾಯಿತ ಸರ್ಕಾರದ ಅವಧಿ 2027ರವರೆಗೆ ಇದೆ. ಆದರೆ ಸರ್ಕಾರವನ್ನು ಅಮಾನತಿನಲ್ಲಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.