ADVERTISEMENT

ಪಕ್ಷಕ್ಕೆ ಸೇರಿದರೆ ಪ್ರಕರಣಗಳನ್ನು ಕೈಬಿಡುವುದಾಗಿ ಬಿಜೆಪಿ ಆಮಿಷ: ಮನೀಶ್ ಸಿಸೋಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2022, 7:37 IST
Last Updated 22 ಆಗಸ್ಟ್ 2022, 7:37 IST
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ   

ನವದೆಹಲಿ: ಬಿಜೆಪಿ ಸೇರಿದರೆ ಸಿಬಿಐ, ಜಾರಿ ನಿರ್ದೇಶನಾಲಯಗಳು (ಇ.ಡಿ) ದಾಖಲಿಸಿಕೊಂಡಿರುವ ಎಲ್ಲ ಪ್ರಕರಣಗಳನ್ನು ಕೈಬಿಡುವುದಾಗಿ ಆ ಪಕ್ಷದವರು ಆಮಿಷವೊಡ್ಡಿದ್ದರು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ.

‘ಎಎಪಿ (ಆಮ್ ಆದ್ಮಿ ಪಕ್ಷ) ತೊರೆದು ಬಿಜೆಪಿ ಸೇರಿ. ನಿಮ್ಮ ವಿರುದ್ಧ ಸಿಬಿಐ ಹಾಗೂ ಇ.ಡಿ ದಾಖಲಿಸಿಕೊಂಡಿರುವ ಎಲ್ಲ ಪ್ರಕರಣಗಳನ್ನು ಮುಚ್ಚಿಹಾಕುವ ಬಗ್ಗೆ ನಾವು ಭರವಸೆ ನೀಡುತ್ತೇವೆ ಎಂದು ಬಿಜೆಪಿಯಿಂದ ಸಂದೇಶ ಬಂದಿತ್ತು. ನಾನು ಮಹಾರಾಣಾ ಪ್ರತಾಪ್‌ನ ವಂಶಸ್ಥ, ನಾನು ರಜಪೂತ. ತಲೆಯನ್ನು ಕತ್ತರಿಸಿ ಹಾಕಿದರೂ ಭ್ರಷ್ಟರು ಮತ್ತು ಪಿತೂರಿಗಾರರ ಜತೆ ಸೇರುವುದಿಲ್ಲ. ನನ್ನ ವಿರುದ್ಧದ ಪ್ರಕರಣಗಳೆಲ್ಲವೂ ಸುಳ್ಳು. ಏನು ಬೇಕಾದರೂ ಮಾಡಿಕೊಳ್ಳಿ ಎಂಬುದಾಗಿ ಬಿಜೆಪಿ ಸಂದೇಶಕ್ಕೆ ಉತ್ತರಿಸಿದ್ದೇನೆ’ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಹಾಗೂ ಸಂಸ್ಥೆಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಇದರಲ್ಲಿ ಸಿಸೋಡಿಯಾ ಸಹ ಇದ್ದಾರೆ.

2021-22ನೇ ಸಾಲಿನ ದೆಹಲಿಯ ಜಿಎನ್‌ಸಿಟಿಡಿಯ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರಿನ ಆಧಾರದಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಸೋಡಿಯಾ ಮನೆ ಮೇಲೆ ಈಗಾಗಲೇ ಸಿಬಿಐ ದಾಳಿ ನಡೆಸಿದೆ. ಈ ವಿಚಾರವಾಗಿ ರಾಜಕೀಯ ಆರೋಪ–ಪ್ರತ್ಯಾರೋಪಗಳೂ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.