ADVERTISEMENT

ಬಂಧನ ಭೀತಿಯಿಂದ ಒಗ್ಗೂಡಿದ ಭ್ರಷ್ಟರು: ನರೇಂದ್ರ ಮೋದಿ

ಮಹಾಘಟಬಂಧನ್‌ ನಾಯಕರ ವಿರುದ್ಧ ಕಿಡಿ ಕಾರಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 19:38 IST
Last Updated 27 ಜನವರಿ 2019, 19:38 IST
ತಮಿಳುನಾಡಿನ ಮದುರೈನಲ್ಲಿ ಭಾನುವಾರ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಯಕರ್ತರು ಗದೆಯನ್ನು ಕಾಣಿಕೆ ಅರ್ಪಿಸಿದರು  –ಪಿಟಿಐ ಚಿತ್ರ
ತಮಿಳುನಾಡಿನ ಮದುರೈನಲ್ಲಿ ಭಾನುವಾರ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಯಕರ್ತರು ಗದೆಯನ್ನು ಕಾಣಿಕೆ ಅರ್ಪಿಸಿದರು  –ಪಿಟಿಐ ಚಿತ್ರ   

ಮದುರೈ: ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿ ಬೀಳುವ ಭಯದಿಂದ ವಿರೋಧ ಪಕ್ಷಗಳ ನಾಯಕರು ವೈಮನಸ್ಸು ಮರೆತು ಒಂದಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ವಿರೋಧ ಪಕ್ಷಗಳ ನಾಯಕರಿಗೆ ಸಮಾನ ಸೈದ್ಧಾಂತಿಕ ನಿಲುವುಗಳಿಲ್ಲ. ಭ್ರಷ್ಟರಿಗೆ ದುಃಸ್ವಪ್ನವಾಗಿರುವ ಈ ಚೌಕೀದಾರರನ್ನು ಅಧಿಕಾರದಿಂದ ಕೆಳಗಿಳಿಸುವುದೊಂದೇ ಮಹಾಘಟಬಂಧನ್‌ ನಾಯಕರ ಪರಮೋಚ್ಚ ಗುರಿ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮದುರೈಯಲ್ಲಿ ಭಾನುವಾರ ಬಿಜೆಪಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾಘಟಬಂಧನ್‌ ನಾಯಕರಲ್ಲಿ ನಿಜವಾದ ಒಗ್ಗಟ್ಟು ಮತ್ತು ಹೊಂದಾಣಿಕೆ ಇಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಅವರೆಲ್ಲ ಒಂದಾಗಿದ್ದಾರೆ ಎಂದರು.

ADVERTISEMENT

ಭ್ರಷ್ಟಾಚಾರ ನಿರ್ಮೂಲನೆಗೆ ಕೇಂದ್ರದ ಎನ್‌ಡಿಎ ಸರ್ಕಾರ ಕೈಕೊಂಡ ಕಠಿಣ ಕ್ರಮಗಳು ವಿರೋಧ ಪಕ್ಷಗಳ ನಾಯಕರು ಸೇರಿದಂತೆ ದೇಶದ ಅನೇಕ ಭ್ರಷ್ಟರ ನಿದ್ದೆಗೆಡಿಸಿವೆ. ಸೇನಾ ಒಪ್ಪಂದ, ಸರ್ಕಾರಿ ಗುತ್ತಿಗೆ, ಅಭಿವೃದ್ಧಿ ಯೋಜನೆಗಳ ಹೆಸರಲ್ಲಿ ಹಣ ಕೊಳ್ಳೆ ಹೊಡೆದವರೆಲ್ಲ ಬಂಧನ ಭೀತಿಯಿಂದ ಒಂದಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಂತರ ಕೇರಳದ ತ್ರಿಶ್ಶೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಿಪಿಎಂ ನೇತೃತ್ವದ ಎಡರಂಗದ ಸರ್ಕಾರಕ್ಕೆ ಕೇರಳ ಜನರ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಏಮ್ಸ್‌ಗೆ ಶಂಕುಸ್ಥಾಪನೆ:ಇದಕ್ಕೂ ಮೊದಲು ಅವರು, ಮದುರೆ ಸಮೀಪದ ಥೊಪ್ಪುರ್‌ನಲ್ಲಿ ಅಂದಾಜು ₹1,264 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಆರೋಗ್ಯಸೇವೆ ಒದಗಿಸಲು ಎನ್‌ಡಿಎ ಸರ್ಕಾರ ಆದ್ಯತೆ ನೀಡಿದ್ದು, ದೇಶದ 14 ಕಡೆ ಏಮ್ಸ್‌ ಆಸ್ಪತ್ರೆ ಆರಂಭಿಸಲು ನಿರ್ಧರಿಸಿದೆ ಎಂದರು.

ಮೇಲ್ವರ್ಗದ ಬಡವರಿಗೆ ಶೇ 10ರಷ್ಟು ಮೀಸಲಾತಿಯಿಂದ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರ ಮೀಸಲಾತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ವೇದಿಕೆಯಲ್ಲಿದ್ದರು.

ಸಿದ್ಧಗಂಗಾ ಶ್ರೀ ಸ್ಮರಿಸಿದ ಪ್ರಧಾನಿ

ಭಾನುವಾರ ಪ್ರಸಾರವಾದ ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ತುಮಕೂರು ಸಿದ್ಧಗಂಗಾ ಮಠದ
ಡಾ. ಶಿವಕುಮಾರ ಸ್ವಾಮೀಜಿ ಅವರನ್ನು ಸ್ಮರಿಸಿದರು.

ಸಾಮಾಜಿಕ ಸೇವೆ, ಲಕ್ಷಾಂತರ ಬಡಮಕ್ಕಳ ಶಿಕ್ಷಣಕ್ಕಾಗಿ ಸಿದ್ಧಗಂಗಾ ಶ್ರೀಗಳು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಶ್ಲಾಘಿಸಿದರು.

ಜನರಿಗೆ ಆಹಾರ, ಶಿಕ್ಷಣ ಮತ್ತು ಆಶ್ರಯ ದೊರೆಯಬೇಕು ಎನ್ನುವುದು ಸ್ವಾಮೀಜಿ ಅವರ ಆಶಯವಾಗಿತ್ತು ಎಂದರು.

ಮೋದಿಗೆ ಪ್ರತಿಭಟನೆ ಬಿಸಿ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮಿಳುನಾಡಿನಲ್ಲಿ ಪ್ರತಿಭಟನೆ ಬಿಸಿ ಎದುರಿಸಬೇಕಾಯಿತು.

ಕಾವೇರಿ ಮತ್ತು ಮೇಕೆದಾಟು ವಿಷಯದಲ್ಲಿ ಪ್ರಧಾನಿಯು ತಮಿಳುನಾಡಿಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಎಂಡಿಎಂಕೆ ಮುಖ್ಯಸ್ಥ ವೈಕೊ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.

ಕಪ್ಪು ಬಲೂನುಗಳನ್ನು ಹಾರಿ ಬಿಟ್ಟು ‘ಮೋದಿ ಮರಳಿ ಹೋಗಿ’ ಎಂದು ಘೋಷಣೆ ಕೂಗಿದರು. ಪೊಲೀಸರು ನೂರಾರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.ಎಂಡಿಎಂಕೆಗೆ ಪ್ರತಿಯಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದರು.

ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ:ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ #ಗೋಬ್ಯಾಕ್‌ಮೋದಿ ಅಡಿ ಆರಂಭವಾದ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೋದಿ ಅವರನ್ನು ಲೇವಡಿ ಮಾಡುವ ಬರಹ ಮತ್ತು ಚಿತ್ರಗಳು ವೈರಲ್‌ ಆಗಿವೆ.

ಗಜ ಚಂಡಮಾರುತಕ್ಕೆ ತತ್ತರಿಸಿದ ತಮಿಳುನಾಡಿನ ಜಿಲ್ಲೆಗಳಿಗೆ ಪ್ರಧಾನಿ ಭೇಟಿ ನೀಡದಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿಯವರು #ಮದುರೆಥ್ಯಾಂಕ್ಸ್‌ಮೋದಿ ಮತ್ತು #ಟಿಎನ್‌ವೆಲ್‌ಕಮ್ಸ್‌ ಮೋದಿ ಆಂದೋಲನ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.