ADVERTISEMENT

ಎಎಪಿಯನ್ನು ರಹಸ್ಯವಾಗಿ ಬೆಂಬಲಿಸುತ್ತಿರುವ ಗುಜರಾತ್‌ ಬಿಜೆಪಿ ನಾಯಕರು: ಕೇಜ್ರಿವಾಲ್

ಪಕ್ಷದ ಚಿಂತೆ ಬಿಟ್ಟು ಎಎಪಿಗೆ ಕೆಲಸ ಮಾಡಿ: ವಿವಿಧ ಪಕ್ಷಗಳ ಕಾರ್ಯಕರ್ತರಿಗೆ ಕೇಜ್ರಿವಾಲ್‌ ಕರೆ

ಪಿಟಿಐ
Published 9 ಅಕ್ಟೋಬರ್ 2022, 13:53 IST
Last Updated 9 ಅಕ್ಟೋಬರ್ 2022, 13:53 IST
ವಲ್ಸದ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಪಕ್ಷದ ರ್‍ಯಾಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಾತನಾಡಿದರು –ಪಿಟಿಐ ಚಿತ್ರ
ವಲ್ಸದ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಪಕ್ಷದ ರ್‍ಯಾಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಾತನಾಡಿದರು –ಪಿಟಿಐ ಚಿತ್ರ   

ಧರ್ಮ್‌ಪುರ (ಗುಜರಾತ್‌): ‘ಬಿಜೆಪಿಯ ಹಲವು ನಾಯಕರು, ಕಾರ್ಯಕರ್ತರು ನಮ್ಮ ಪಕ್ಷವನ್ನುರಹಸ್ಯವಾಗಿ ಬೆಂಬಲಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕು ಎಂದು ಅದೇ ‍ಪಕ್ಷದ ಕಾರ್ಯಕರ್ತರು ಬಯಸುತ್ತಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದರು.

ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ವಲ್ಸದ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ರ್‍ಯಾಲಿಯಲ್ಲಿ ಅವರು ಮಾತನಾಡಿದರು. ‘ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸಿ ಎಂದು ಅದೇ ಪಕ್ಷದ ನಾಯಕರು, ಕಾರ್ಯಕರ್ತರು ನನ್ನಲ್ಲಿರಸಹ್ಯವಾಗಿ ಮನವಿ ಮಾಡುತ್ತಿದ್ದಾರೆ. ನಾನು ಹೇಳುವುದು ಇಷ್ಟೆ. ಯಾವೆಲ್ಲಾ ನಾಯಕರು, ಕಾರ್ಯಕರ್ತರು ಬಿಜೆಪಿ ಸೋಲಬೇಕು ಎಂದು ಬಯಸಿದ್ದೀರೋ, ನೀವೆಲ್ಲಾ ರಹಸ್ಯವಾಗಿ ನನ್ನ ಪಕ್ಷದ ಪರ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

‘27 ವರ್ಷಗಳ ಬಿಜೆಪಿ ದುರಹಂಕಾರವನ್ನು ನಾವು ಮುರಿಯಬೇಕಿದೆ. ನನಗೆ ಗೊತ್ತು ನೀವೆಲ್ಲಾ ವ್ಯಾಪಾರ ಮಾಡುವವರು. ನಮಗೆ ಬೆಂಬಲ ನೀಡಿದರೆ, ಬಿಜೆಪಿ ಅವರು ನಿಮ್ಮ ವ್ಯಾಪಾರಕ್ಕೆ ತೊಂದರೆ ಕೊಡಬಹುದು. ಆದ್ದರಿಂದ ನೀವು ಅಲ್ಲಿಯೇ ಇದ್ದು, ಅವರನ್ನು ಸೋಲಿಸುವ ಕೆಲಸ ಮಾಡಿ. ಕಾಂಗ್ರೆಸ್‌ನ ಕಾರ್ಯಕರ್ತರು ಕೂಡ ನಿಮ್ಮ ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ; ಭಯಪಡಬೇಡಿ. ನಿಮ್ಮ ಪಕ್ಷವನ್ನು ಮರೆತು ಬಿಡಿ’ ಎಂದರು.

ADVERTISEMENT

‘ಕೇಜ್ರಿವಾಲ್‌ ಒಳ್ಳೆಯವರು. ಆದರೆ, ಅವರು ಈ ಬಾರಿ ಗೆಲ್ಲುವುದಿಲ್ಲ ಎಂದು ನಿಮ್ಮಲ್ಲಿ ಯಾರಾದರು ಹೇಳಿದರೆ. ಅವರು ಬಿಜೆಪಿಯವರು ಎಂದು ನೀವು ತಿಳಿಯಿರಿ. ಅವರಿಗೆ ನೀವು ಹೇಳಿ, ಮುಂದಿನ ಬಾರಿ ಅಲ್ಲ ಈ ಬಾರಿಯೇ ಕೇಜ್ರಿವಾಲ್‌ ಅವರು ಗೆಲ್ಲುತ್ತಾರೆ ಎಂದು’ ಎಂದು ಕೇಜ್ರಿವಾಲ್‌ ಅವರು ಮತದಾರರಿಗೆ ಹೇಳಿದರು. ‘ರಾಕ್ಷಸರನ್ನು ನಿರ್ಣಾಮ ಮಾಡುವುದಕ್ಕಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅನ್ನೇ ಬೆಂಬಲಿಸಿ’ ಎಂದೂ ಮನವಿ ಮಾಡಿದರು.

‘ರಾಕ್ಷಸರ ಸಂಹಾರ: ಕೃಷ್ಣ ವಹಿಸಿದ ಕೆಲಸ’

ಗುಜರಾತ್‌ನ ಹಲವು ನಗರಗಳ ಗೋಡೆಗಳ ಮೇಲೆ ಕೇಜ್ರಿವಾಲ್‌ ಅವರನ್ನು ‘ಹಿಂದೂ ವಿರೋಧಿ’ ಎಂದು ಸಂಬೋಧಿಸಿ ಪೋಸ್ಟ್‌ರ್‌ಗಳನ್ನು ಶನಿವಾರ ಅಂಟಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಕೇಜ್ರಿವಾಲ್‌, ‘ಈ ಪೋಸ್ಟರ್‌ನ ಹಿಂದಿರುವವರು ಕಂಸನ ಕುಲದವರು ಮತ್ತು ರಾಕ್ಷಸರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಕೃಷ್ಣಜನ್ಮಾಷ್ಠಮಿಯ ದಿನ ಹುಟ್ಟಿದವನು. ಮನೆಯವರು ನನ್ನನ್ನು ಪ್ರೀತಿಯಿಂದ ಕೃಷ್ಣ ಎಂದು ಕರೆಯುತ್ತಾರೆ. ಕೃಷ್ಣ ನನ್ನನ್ನು ಆಶೀರ್ವದಿಸಿ ಕಂಸನ ಕುಲದವರನ್ನು ಮರ್ಧಿಸುವ ವಿಶೇಷ ಕೆಲಸವೊಂದನ್ನು ನೀಡಿದ್ದಾನೆ. ನೀವು ಒಳ್ಳೆಯವರು. ನನಗೆ ನಿಮ್ಮ ಬೆಂಬಲ ಬೇಕು. ದೇವರು ನನಗೆ ನೀಡಿದ ಈ ಕೆಲಸವನ್ನು ಪೂರ್ಣಗೊಳಿಸಲು ನೀವು ನನಗೆ ಸಹಾಯ ಮಾಡುತ್ತೀರಾ?’ ಎಂದು ಮತದಾರರಲ್ಲಿ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.