ADVERTISEMENT

ಡಾರ್ಜಲಿಂಗ್‌ನಲ್ಲಿ ಭೂಕುಸಿತ, ಪ್ರವಾಹ: 20 ಮಂದಿ ಸಾವು

ಪಿಟಿಐ
Published 5 ಅಕ್ಟೋಬರ್ 2025, 15:20 IST
Last Updated 5 ಅಕ್ಟೋಬರ್ 2025, 15:20 IST
<div class="paragraphs"><p>ಡಾರ್ಜಲಿಂಗ್‌ನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಮನೆಗಳಿಗೆ ಹಾನಿಯಾಗಿದೆ</p></div>

ಡಾರ್ಜಲಿಂಗ್‌ನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಮನೆಗಳಿಗೆ ಹಾನಿಯಾಗಿದೆ

   

ಪಿಟಿಐ ಚಿತ್ರ

ಕೋಲ್ಕತ್ತ/ಡಾರ್ಜಲಿಂಗ್‌: ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಡಾರ್ಜಲಿಂಗ್‌ ಹಾಗೂ ಮಿರಿಕ್‌ ಪ್ರದೇಶದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾದ ಭೂಕುಸಿತ ಹಾಗೂ ಪ್ರವಾಹದಿಂದ ಮಕ್ಕಳು ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ADVERTISEMENT

ಒಂದೇ ರಾತ್ರಿಯಲ್ಲಿ 300 ಮಿ.ಮೀ. ಮಳೆಯಾಗಿದ್ದು, ನದಿಗಳು ಉಕ್ಕಿ ಹರಿದಿವೆ. ಇದರಿಂದ ಹಲವೆಡೆ ವ್ಯಾಪಕ ಹಾನಿಯಾಗಿದೆ. ನೀರು ರಭಸವಾಗಿ ಹರಿಯುತ್ತಿದ್ದು, ಸೇತುವೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ. ಅನೇಕ ಮನೆಗಳು ಕೊಚ್ಚಿ ಹೋಗಿವೆ. ಹಲವು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಡಾರ್ಜಲಿಂಗ್‌ ಜಿಲ್ಲೆಯಲ್ಲಿ ಎರಡು ಕಬ್ಬಿಣದ ಸೇತುವೆಗಳು ಮುರಿದಿವೆ.

ಜಲಪೈಗುಡಿ, ಅಲೀಪುರದೂರ್‌, ಸರ್ಸಾಲಿ, ಜಸ್ಬಿರ್‌ಗಾಂವ್‌, ಮಿರಿಕ್‌ ಬಸ್ತಿ, ಧಾರ್‌ಗಾಂವ್‌ (ಮೆಚಿ), ನಾಗರಾಕಾಟಾ, ಮಿರಿಕ್‌ ಸರೋವರ ಪ್ರದೇಶದಲ್ಲಿ ಸಾವು–ನೋವು ಸಂಭವಿಸಿವೆ. ಮಿರಿಕ್‌ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಕನಿಷ್ಠ 11 ಮಂದಿ ಅಸುನೀಗಿದ್ದಾರೆ. ಏಳು ಮಂದಿ ಗಾಯಾಳುಗಳನ್ನು ರಕ್ಷಿಸಲಾಗಿದೆ.

ಡಾರ್ಜಲಿಂಗ್‌ನಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಧಾರ್‌ಗಾಂವ್‌, ನಾಗರಾಕಾಟಾ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿದ್ದ 40 ಜನರನ್ನು ರಕ್ಷಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ಅನೇಕ ಮನೆಗಳು ನೆಲಸಮವಾಗಿವೆ. ಪೊಲೀಸರು, ಸ್ಥಳೀಯ ಆಡಳಿತ ಹಾಗೂ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಹಾಗೂ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಆದರೆ, ಎಷ್ಟು ಮೊತ್ತ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ರೆಡ್‌ ಅಲರ್ಟ್‌: ‘ಡಾರ್ಜಲಿಂಗ್‌, ಕಾಲಿಂಪಾಂಗ್‌ ಸೇರಿದಂತೆ ವಿವಿಧೆಡೆ ಸೋಮವಾರದವರೆಗೆ ಭಾರಿ ಮಳೆಯಾಗಲಿದ್ದು, ಮತ್ತಷ್ಟು ಭೂಕುಸಿತ ಸಂಭವಿಸುವ ಅಪಾಯ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ‘ರೆಡ್‌ ಅಲರ್ಟ್‌’ ಘೋಷಿಸಿದೆ.

ಈ ಭಾಗದಲ್ಲಿ ಮಳೆಗಾಲದಲ್ಲಿ ಭೂಕುಸಿತ, ಪ್ರವಾಹ ಸಂಭವಿಸುವುದು ಸಹಜ. ಆದರೆ, ಹವಾಮಾನ ಬದಲಾವಣೆ, ಯೋಜಿತವಲ್ಲದ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ.

ಪ್ರತಿಭಟನಾ ರ‍್ಯಾಲಿ: ಭೂಕುಸಿತ ಹಾಗೂ ಪ್ರವಾಹದಿಂದ ಅನೇಕರು ಮೃತಪಟ್ಟಿದ್ದರೂ ರಾಜ್ಯ ಸರ್ಕಾರವು ದುರ್ಗಾ ಪೂಜಾ ಕಾರ್ಯಕ್ರಮ ನಡೆಸಲು ಮುಂದಾಗಿದೆ ಎಂದು ಆರೋಪಿಸಿ ವಿರೋಧಪಕ್ಷದ ನಾಯಕ ಸುವೇಂದು ಅಧಿಕಾರಿ ಭಾನುವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.

‘ಪ್ರವಾಸಿಗರ ಸುರಕ್ಷತೆಗೆ ಕ್ರಮ‘

‘ಭೂತಾನ್‌ನಲ್ಲಿ ಬೀಳುತ್ತಿರುವ ನಿರಂತರ ಮಳೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಅನೇಕ ಮನೆ ರಸ್ತೆಗಳಿಗೆ ಹಾನಿಯಾಗಿದೆ. ಪ್ರವಾಹಪೀಡಿತ ಐದು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆಗಳನ್ನು ಮಾಡಿದ್ದೇವೆ. ಪ್ರವಾಹಪೀಡಿತ ಪ್ರದೇಶಕ್ಕೆ ಅ.6ರಂದು ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

‘ಭೂಕುಸಿತ ಹಾಗೂ ರಸ್ತೆ ಸಂಪರ್ಕ ಕಡಿತದಿಂದಾಗಿ ಈ ಭಾಗದಲ್ಲಿ ಸಾವಿರಾರು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರು ಭಯಪಡಬಾರದು’ ಎಂದು ಬ್ಯಾನರ್ಜಿ ಮನವಿ ಮಾಡಿದ್ದಾರೆ.

ದುರಂತದಲ್ಲಿ ಅನೇಕರು ಮೃತಪಟ್ಟಿರುವುದು ನೋವು ತಂದಿದೆ. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು. ಡಾರ್ಜಲಿಂಗ್‌ ಸುತ್ತಲಿನ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.
ನರೇಂದ್ರ ಮೋದಿ, ಪ್ರಧಾನಿ
ಪಶ್ಚಿಮ ಬಂಗಾಳ ಸಿಕ್ಕಿಂ ರಾಜ್ಯಗಳಲ್ಲಿ ಭೂಕುಸಿತ ಉಂಟಾಗಿದ್ದು ಅನೇಕರು ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರವು ಈ ರಾಜ್ಯಗಳಿಗೆ ಪರಿಹಾರ ಘೋಷಿಸಬೇಕು.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಡಾರ್ಜಲಿಂಗ್‌ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಯಾಗಿದೆ –ಪಿಟಿಐ ಚಿತ್ರ
ಡಾರ್ಜಲಿಂಗ್‌ನಲ್ಲಿ ಉಂಟಾದ ಭೂಕುಸಿತದಿಂದಾಗಿ ಸೇತುವೆ ಮುರಿದುಬಿದ್ದಿದ್ದು ಅಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಯಿತು –ಪಿಟಿಐ ಚಿತ್ರ 
ಡಾರ್ಜಲಿಂಗ್‌ನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಬಾಲಾಸನ್‌ ಸೇತುವೆಯ ಒಂದು ಭಾಗ ಕುಸಿದಿದೆ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.