ಕೋಲ್ಕತ್ತ: ಪಶ್ಚಿಮ ಬಂಗಾಳದ ಬೀರ್‌ಭೂಮ್‌ನಲ್ಲಿ ಮಂಗಳವಾರ ಬಸ್ ಮತ್ತು ಆಟೊ ರಿಕ್ಷಾ ನಡುವೆಡಿಕ್ಕಿಯಾಗಿ ಎಂಟು ಮಂದಿ ಮಹಿಳಾ ಕೃಷಿ ಕಾರ್ಮಿಕರು ಸೇರಿದಂತೆ 9 ಜನ ಮೃತಪಟ್ಟಿದ್ದಾರೆ.
ಬೀರ್‌ಭೂಮ್ ಜಿಲ್ಲೆಯ ಮಲ್ಲಾರ್‌ಪುರ ಸಮೀಪದ ರಾಮ್‌ಪುರಹಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ–60ರಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿತಿಗಿಂತ ಹೆಚ್ಚು ಜನರನ್ನು ತುಂಬಿಕೊಂಡು ತೆರಳುತ್ತಿದ್ದ ರಿಕ್ಷಾ ಮತ್ತು ದಕ್ಷಿಣ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾಗಿವೆ.
ಮೃತಪಟ್ಟ ಎಂಟು ಮಂದಿ ಮಹಿಳೆಯರು ಆಟೊ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಮತ್ತೊಬ್ಬ ವ್ಯಕ್ತಿ ಆಟೊ ಚಾಲಕ ಎಂದು ಬೀರ್‌ಭೂಮ್ ಜಿಲ್ಲಾ ಎಸ್‌ಪಿ ನಾಗೇಂದ್ರನಾಥ್ ತ್ರಿಪಾಠಿ ತಿಳಿಸಿದ್ದಾರೆ.
ಪ್ರಧಾನಿ ಸಂತಾಪ, ₹2 ಲಕ್ಷ ಪರಿಹಾರ ಘೋಷಣೆ
ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
‘ಪಶ್ಚಿಮ ಬಂಗಾಳದ ಬೀರ್‌ಭೂಮ್‌ನಲ್ಲಿ ಸಂಭವಿಸಿದ ದುರಂತದಲ್ಲಿ ಜೀವಹಾನಿಯಾಗಿರುವುದು ಅತೀವ ವೇದನೆ ಉಂಟುಮಾಡಿದೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಮೃತಪಟ್ಟವರ ಕುಟುಂಬದವರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಪರಿಹಾರ ನೀಡಲಾಗುವುದು’ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.