ADVERTISEMENT

ಭಕ್ತರ ಮನೆ ಬಾಗಿಲಿಗೆ ಶಬರಿಮಲೆ ಪ್ರಸಾದ

ಕಾಯ್ದಿರಿಸಿದ ಗರಿಷ್ಠ ಹತ್ತು ದಿನಗಳೊಳಗೆ ಕೈ ಸೇರಲಿರುವ ಕಿಟ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 12:57 IST
Last Updated 1 ಡಿಸೆಂಬರ್ 2020, 12:57 IST
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ –ಸಂಗ್ರಹ ಚಿತ್ರ
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ –ಸಂಗ್ರಹ ಚಿತ್ರ   

ತಿರುವನಂತಪುರ: ಶಬರಿಮಲೆ ತೀರ್ಥಯಾತ್ರೆ ಋತು ಈಗಾಗಲೇ ಶುರುವಾಗಿದೆ. ಹೀಗಿದ್ದರೂ ಕೋವಿಡ್‌ ಕಾರಣ ಅನೇಕ ಭಕ್ತರಿಗೆ ದೇವರ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತಹವರು ಈಗ ಮರುಗಬೇಕಿಲ್ಲ.

ಶಬರಿಮಲೆಯ ತಿರುವಾಂಕೂರ್‌ ದೇವಸ್ವಂ ಮಂಡಳಿಯು ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಸಿದ್ಧವಾದ ಪ್ರಸಾದವನ್ನು ಸ್ಪೀಡ್‌ ಪೋಸ್ಟ್‌ ಮೂಲಕ ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ.

‘ಸ್ವಾಮಿ ಪ್ರಸಾದಂ’ ಹೆಸರಿನ ಈ ಕಿಟ್‌ನಲ್ಲಿ ಒಂದು ಪ್ಯಾಕೆಟ್‌ ‘ಅರವಣ’ ಪಾಯಸ, ತುಪ್ಪ, ಅರಿಸಿನ–ಕುಂಕುಮ, ವಿಭೂತಿ ಹಾಗೂ ಅರ್ಚನೆಯ ಪ್ರಸಾದ ಇರಲಿದೆ. ಪ್ರಸಾದ ಕಾಯ್ದಿರಿಸಿದ ಗರಿಷ್ಠ ಹತ್ತು ದಿನಗಳ ಒಳಗೆ ಕಿಟ್‌ ಭಕ್ತರ ಕೈ ಸೇರಲಿದೆ.

ADVERTISEMENT

ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ದೇವಸ್ವಂ ಮಂಡಳಿಯು ಪ್ರಸಾದವನ್ನು ಪಂಪ ಸ್ಥಾನಕ್ಕೆ ತಂದಿಡುವ ವ್ಯವಸ್ಥೆ ಮಾಡಲಿದ್ದು ಅದನ್ನು ಅಂಚೆ ಇಲಾಖೆಯವರು ವಿಶೇಷ ಪೆಟ್ಟಿಗೆಗಳಲ್ಲಿಟ್ಟು ಭಕ್ತರ ಮನೆಗೆ ತಲುಪಿಸಲಿದ್ದಾರೆ.

ಪ್ರಸಾದದ ಕಿಟ್‌ವೊಂದರ ಬೆಲೆ ₹450. ಈ ಪೈಕಿ ₹250 ದೇವಸ್ವಂ ಮಂಡಳಿಗೆ ಸೇರಲಿದೆ. ಕೋವಿಡ್‌ನಿಂದಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಮುಖವಾಗಿರುವುದರಿಂದ ಮಂಡಳಿಯ ಆದಾಯಕ್ಕೆ ಭಾರಿ ಪೆಟ್ಟು ಬಿದ್ದಿದೆ. ಪ್ರಸಾದ ತಲುಪಿಸುವ ಯೋಜನೆಯಿಂದ ಮಂಡಳಿಯ ಬೊಕ್ಕಸ ತುಂಬುವ ನಿರೀಕ್ಷೆ ಇದೆ.

‘ಕಳೆದ ವಾರದ ಅಂತ್ಯಕ್ಕೆ ಒಟ್ಟು 9,000 ಮಂದಿ ಪ್ರಸಾದವನ್ನು ಕಾಯ್ದಿರಿಸಿದ್ದಾರೆ. ಈ ಪೈಕಿ ಕೇರಳ ಹಾಗೂ ದಕ್ಷಿಣ ಭಾರತದ ರಾಜ್ಯಗಳ ಮಂದಿಯೇ ಹೆಚ್ಚಿದ್ದಾರೆ. ಮಹಾರಾಷ್ಟ್ರದವರೂ ಸ್ಪೀಡ್‌ ಪೋಸ್ಟ್‌ ಮೂಲಕ ಪ್ರಸಾದ ಪಡೆಯಲು ಆಸಕ್ತಿ ತೋರಿದ್ದಾರೆ. ರಾಜಸ್ಥಾನ, ಕಾಶ್ಮೀರದಲ್ಲೂ ಕೆಲವರು ಈ ಯೋಜನೆಯ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಕೇರಳದ ಅಂಚೆ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಯೋಜನೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಅಂಚೆ ಇಲಾಖೆ ಉತ್ಸುಕವಾಗಿದ್ದು, ಸ್ಥಳೀಯ ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ತಯಾರಿಸಿ ಅವುಗಳನ್ನು ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲೂ ಹಾಕುವ ಆಲೋಚನೆಯಲ್ಲಿದೆ.

ಸದ್ಯ ಶಬರಿಮಲೆಯಲ್ಲಿ ಸಾಮಾನ್ಯ ದಿನಗಳಲ್ಲಿ 1000, ವಾರಾಂತ್ಯ (ಶನಿವಾರ, ಭಾನುವಾರ) ಹಾಗೂ ರಜಾ ದಿನಗಳಲ್ಲಿ 2000 ಹಾಗೂ ವಿಶೇಷ ಸಂದರ್ಭಗಳಲ್ಲಿ 5000 ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಕೋವಿಡ್‌–19 ಮಾರ್ಗಸೂಚಿಗಳನ್ನು ಸಡಿಲಿಸಿ ಮತ್ತಷ್ಟು ಯಾತ್ರಾರ್ಥಿಗಳ ಭೇಟಿಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಯನ್ನೂ ಇಡಲಾಗಿದೆ. ಈ ಬಗ್ಗೆ ಕೇರಳ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.