ಗೋಕಾಕ (ಬೆಳಗಾವಿ ಜಿಲ್ಲೆ): ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಮರಳುತ್ತಿದ್ದ ವೇಳೆ ಸೋಮವಾರ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಗೋಕಾಕ ನಗರದ ಲಕ್ಷ್ಮೀ ಬಡಾವಣೆಯ ನಿವಾಸಿ ಬಾಲಚಂದ್ರ ನಾರಾಯಣ ಗೌಡರ (55), ಗೊಂಬಿಗುಡಿ ಬಡಾವಣೆ ನಿವಾಸಿ ಬಸವರಾಜ್ ನಿರೂಪಾದಪ್ಪ ಕುರಟ್ಟಿ (63), ಗುರುವಾರ ಪೇಟೆಯ ನಿವಾಸಿಗಳಾದ ಬಸವರಾಜ್ ಶಿವಪ್ಪ ದೊಡಮನಿ (49), ವಿರೂಪಾಕ್ಷ ಚನ್ನಪ್ಪ ಗುಮತಿ (61), ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಪೋಸ್ಟ್ ವ್ಯಾಪ್ತಿಯ ಆನಂದಪುರದ ಸುನೀಲ್ ಬಾಲಕೃಷ್ಣ ಶೇಡಶ್ಯಾಳೆ (45) ಹಾಗೂ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಕಮತಗಿಯ ಈರಣ್ಣ ಶಂಕರಪ್ಪ ಶೇಬಿನಕಟ್ಟಿ (43) ಮೃತರು. ಗೋಕಾಕದ ಮುಸ್ತಾಕ ಶಿಂಧಿಕುರಬೇಟ್ (ವಾಹನ ಚಾಲಕ) ಹಾಗೂ ಸದಾಶಿವ ಉಪಲಾಳಿ ಗಾಯಗೊಂಡಿದ್ದಾರೆ.
‘ಎಲ್ಲರೂ ಫೆ. 18ರಂದು ಪ್ರಯಾಗರಾಜ್‌ಗೆ ತೆರಳಿದ್ದರು. ಪುಣ್ಯಸ್ನಾನ ಮಾಡಿ, ಊರಿಗೆ ಮರಳುತ್ತಿದ್ದರು. ಮಧ್ಯಪ್ರದೇಶದ ಜಬಲ್‌ಪುರದ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನ 5ಕ್ಕೆ ಅಪಘಾತ ಸಂಭವಿಸಿದೆ. 8 ಜನರಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ವಾಹನ ಪಲ್ಟಿಯಾಗಿ ಅವಘಡ ಸಂಭವಿಸಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಮೂರು ಆಂಬುಲೆನ್ಸ್‌ಗಳಲ್ಲಿ ಆರೂ ಮಂದಿಯ ಶವಗಳನ್ನು ಅಲ್ಲಿಂದ ರವಾನಿಸಲಾಗುತ್ತಿದೆ. ಮಂಗಳವಾರ ಮಧ್ಯಾಹ್ನ 3ರ ಸುಮಾರಿಗೆ ಸ್ವಗ್ರಾಮ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪರಿಚಯಸ್ಥರು: ಮೃತರು ಪರಸ್ಪರ ಪರಿಚಯಸ್ಥರಾಗಿದ್ದರು. ವಿರೂಪಾಕ್ಷ ಗುಮತಿ ಮತ್ತು ಬಸವರಾಜ ಕುರಟ್ಟಿ ಗೋಕಾಕದಲ್ಲಿ ಜವಳಿ ವರ್ತಕರಾಗಿದ್ದರು. ಬಸವರಾಜ ದೊಡಮನಿ ಮತ್ತು ಈರಣ್ಣ ಶೇಬಿನಕಟ್ಟಿ ಸಾರಿಗೆ ಸಂಸ್ಥೆ ಬಸ್ ಚಾಲಕರಾಗಿದ್ದರು. ಬಾಲಚಂದ್ರ ನಾರಾಯಣ ಗೌಡರ ಅವರು ವೃತ್ತಿಯಿಂದ ಫ್ಯಾಬ್ರಿಕೇಟರ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.