ADVERTISEMENT

ವಯನಾಡು ಭೂಕುಸಿತದಲ್ಲಿ 5 ಮಂದಿ ಸಾವು: ನೂರಾರು ಮಂದಿ ಸಿಲುಕಿರುವ ಶಂಕೆ

ಪಿಟಿಐ
Published 30 ಜುಲೈ 2024, 3:18 IST
Last Updated 30 ಜುಲೈ 2024, 3:18 IST
   

ವಯನಾಡು(ಕೇರಳ): ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತಗಳು ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯ ಚೂರಲ್ಮಲಾ ಪಟ್ಟಣದಲ್ಲಿ ಒಂದು ಮಗು ಸೇರಿ 4 ಮಂದಿ ಮೃತಪಟ್ಟಿದ್ದಾರೆ. ತೊಂಡೇರ್ನಾಡು ಹಳ್ಳಿಯಲ್ಲಿ ನೇಪಾಳ ಕುಟುಂಬದ ಒಂದು ವರ್ಷದ ಮಗು ಮೃತಪಟ್ಟಿದೆ ಎಂದು ವಯನಾಡಿನ ಜಿಲ್ಲಾ ಹಂತದ ಅಧಿಕಾರಿಗಳು ತಿಳಿಸಿದ್ದಾರೆ.

ದಿ ಮುಂಡಕ್ಕಾಯ್‌, ಚೂರಲ್ಮಲಾ, ಅತ್ತಮಲಾ ಮತ್ತು ನೂಳಪ್ಪುಳ ಗ್ರಾಮಗಳಲ್ಲಿ ಭೂಕುಸಿತದ ಪರಿಣಾಮ ಎದುರಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮುಂಡಕ್ಕಾಯ್ ಪ್ರದೇಶದಲ್ಲಿ ಸಿಲುಕಿರುವ ಜನರನ್ನು ವಾಯು ಮಾರ್ಗದ ಮೂಲಕ ರಕ್ಷಣೆಗೆ ಜಿಲ್ಲಾ ಹಂತದ ಅಧಿಕಾರಿಗಳು ಯೋಜನೆ ಮಾಡುತ್ತಿದ್ದಾರೆ ಎಂದು ಯುಡಿಎಫ್ ಶಾಸಕ ಟಿ. ಸಿದ್ಧಿಕ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

‘ಭೂಕುಸಿತದಲ್ಲಿ ಕಾಣೆಯಾದವರು ಮತ್ತು ಮೃತರ ಕುರಿತಂತೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇಲ್ಲ. ಹಲವು ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಘಟನಾ ಸ್ಥಳಗಳಿಗೆ ತೆರಳಲು ಎನ್‌ಡಿಆರ್‌ಎಫ್ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಈ ನಡುವೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಸುಲೂರ್‌ನಿಂದ ವಯನಾಡುಗೆ ತೆರಳಿವೆ ಎಂದು ಸಿಎಂ ಪಿಣರಾಯಿ ವಿಜಯನ್‌ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭೂಕುಸಿತದ ಬಳಿಕ ಸುತ್ತಮುತ್ತಲಿನ ಪ್ರದೇಶಗಳ ಜನರು ವಿವಿಧ ಶಿಬಿರಗಳು ಮತ್ತು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.