
ಹೈದರಾಬಾದ್: ಸಿಪಿಐನ ಆರು ಮಂದಿ ಹಿರಿಯ ಪದಾಧಿಕಾರಿಗಳು ಸೇರಿದಂತೆ 41 ಮಂದಿ ಕಾರ್ಯಕರ್ತರು ತೆಲಂಗಾಣ ಪೊಲೀಸರ ಎದುರು ಶರಣಾಗಿದ್ದಾರೆ.
ಈ ಬೆಳವಣಿಗೆಯು ನಿಷೇಧಿತ ಸಿಪಿಐ ಸಂಘಟನೆಗೆ ತೀವ್ರ ಹಿನ್ನಡೆಯನ್ನು ತಂದಿದೆ. ‘ಸಿಪಿಐ ಕಾರ್ಯಕರ್ತರು ಶಸ್ತ್ರತ್ಯಾಗ ಮಾಡಿ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ’ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಬಿ.ಶಿವಧಾರ್ ರೆಡ್ಡಿ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಶರಣಾದ ನಕ್ಸಲರು 24 ಬಂದೂಕುಗಳು ಮತ್ತು 733 ಜೀವಂತ ಗುಂಡುಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ’ ಎಂದಿದ್ದಾರೆ.
‘ಸಿಪಿಐ ಸಂಘಟನೆಯು ತನ್ನ ಸದಸ್ಯರನ್ನು ಎಲ್ಲೆಂದರಲ್ಲಿ ಮನಬಂದಂತೆ ನಿಯೋಜಿಸುತ್ತಿತ್ತು. ಸದಸ್ಯರ ಅಭಿಪ್ರಾಯವನ್ನೇ ಕೇಳುತ್ತಿರಲಿಲ್ಲ. ಇದರಿಂದ ಬೇಸತ್ತ ಸದಸ್ಯರು ಶರಣಾಗತಿ ನಿರ್ಧಾರ ಕೈಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
ಛತ್ತೀಸಗಢ: ನಕ್ಸಲ್ ಹತ್ಯೆ
ಬಿಜಾಪುರ (ಪಿಟಿಐ): ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ್ ಮೃತಪಟ್ಟಿದ್ದಾನೆ.
ಮೃತನನ್ನು ಫಗ್ನು ಮಾದ್ವಿ (35) ಎಂದು ಗುರುತಿಸಲಾಗಿದ್ದು, ಈತನ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು.
ಭೈರಾಮಗಢ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಮಾಹಿತಿ ದೊರೆತ ಕಾರಣ ಜಿಲ್ಲಾ ಮೀಸಲು ಪಡೆ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಘಟನಾ ಸ್ಥಳದಿಂದ .303 ರೈಫಲ್, 9 ಎಂಎಂ ಪಿಸ್ತೂಲ್, ಕೆಲವು ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.