ADVERTISEMENT

ಮರಾಠರಿಗೆ ಮೀಸಲಾತಿ ನೀಡಲು ಒಪ್ಪಿಗೆ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಜರಾಂಗೆ

ಪ್ರತಿಭಟನಕಾರರಲ್ಲಿ ಹರ್ಷ

ಪಿಟಿಐ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
ಹಣ್ಣಿರಸ ಕುಡಿಯುವುದರ ಮೂಲಕ ಮರಾಠಿ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಂಗೆ ಅವರು ಮಂಗಳವಾರ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಸಚಿವ ರಾಧಾಕೃಷ್ಣ ಅವರು ಜಾರಂಗೆ ಅವರಿಗೆ ಹಣ್ಣಿನರಸ ಕುಡಿಸಿದರು –ಪಿಟಿಐ ಚಿತ್ರ
ಹಣ್ಣಿರಸ ಕುಡಿಯುವುದರ ಮೂಲಕ ಮರಾಠಿ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಂಗೆ ಅವರು ಮಂಗಳವಾರ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಸಚಿವ ರಾಧಾಕೃಷ್ಣ ಅವರು ಜಾರಂಗೆ ಅವರಿಗೆ ಹಣ್ಣಿನರಸ ಕುಡಿಸಿದರು –ಪಿಟಿಐ ಚಿತ್ರ   

ಮುಂಬೈ: ‘ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿದೆ. ಸ್ನೇಹಿತರೇ ನಾವು ಗೆದ್ದುಬಿಟ್ಟೆವು’ ಎಂದು ಹೋರಾಟಗಾರ ಮನೋಜ್‌ ಜರಾಂಗೆ ಘೋಷಿಸಿದರು.

ಕಳೆದ ಐದು ದಿನಗಳಿಂದ ಸಾವಿರಾರು ಹೋರಾಟಗಾರರೊಂದಿಗೆ ಜರಾಂಗೆ ಅವರು ಇಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಮರಾಠ ಸಮುದಾಯದವರಿಗೆ ಈಗ ಹಿಂದುಳಿದ ವರ್ಗದ ಕೋಟಾದಡಿ ಮೀಸಲಾತಿ ದೊರೆಯಲಿದೆ. ಮರಾಠರಿಗೆ ಮೀಸಲಾತಿ ನೀಡುವ ವಿಷಯ ಪರಿಶೀಲಿಸಲು ರಚಿಸಿದ ಸಂಪುಟ ಉಪಸಮಿತಿಯು ಜರಾಂಗೆ ಅವರ ಬಹುಪಾಲು ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಒಪ್ಪಿಗೆ ನೀಡಿರುವುದಾಗಿಸಮಿತಿಯ ಮುಖ್ಯಸ್ಥ, ಸಚಿವ ರಾಧಾಕೃಷ್ಣ ವಿಖೆ ಪಾಟೀಲ್‌ ಅವರು ಜರಾಂಗೆ ಅವರಿಗೆ ತಿಳಿಸಿದರು.

ADVERTISEMENT

ಸಮಿತಿಯ ಕರಡುಪ್ರತಿಯನ್ನು ಜರಾಂಗೆ ಅವರು ಓದಿ ಹೇಳುತ್ತಿದ್ದಂತೆಯೇ ಇಲ್ಲಿನ ಆಜಾದ್‌ ಮೈದಾನದಲ್ಲಿ ಹೋರಾಟಗಾರರು ಹಲಗೆ ಹೊಡೆದು, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ‘ಸರ್ಕಾರದೊಂದಿಗೆ ಮಾತನಾಡಲು ಸಿದ್ಧನಿದ್ದೇನೆ. ನನ್ನ ಬೇಡಿಕೆಗಳು ಈಡೇರದ ಹೊರತು ಮುಂಬೈ ಬಿಟ್ಟು ತೆರಳುವುದಿಲ್ಲ’ ಎಂದು ಜರಾಂಗೆ ಅವರು ಬೆಳಿಗ್ಗೆಯಷ್ಟೇ ಹೇಳಿದ್ದರು.

‘ಮರಾಠ ಮೀಸಲಾತಿ ಹೋರಾಟಗಾರರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಸೆಪ್ಟೆಂಬರ್‌ ಅಂತ್ಯದ ಒಳಗಾಗಿ ಕೈಬಿಡಲಾಗುವುದು ಎಂದು ಉಪ ಸಮಿತಿಯವರು ಹೇಳಿದ್ದಾರೆ’ ಎಂದರು.

‘ಕುಣಬಿ ಮತ್ತು ಮರಾಠರು ಒಂದೇ ಸಮುದಾಯದವರು ಎಂದು ಸರ್ಕಾರಿ ಆದೇಶ ಹೊರಡಿಸಲು ಕಾನೂನು ಪ್ರಕಾರ ಇರುವ ಆಯ್ಕೆಗಳ ಕುರಿತು ಹುಡುಕಾಟ ನಡೆಯುತ್ತಿದೆ. ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎರಡು ತಿಂಗಳು ಬೇಕಾಗಬಹುದು’ ಎಂದು ಸಚಿವ ರಾಧಾಕೃಷ್ಣ ಹೇಳಿದರು.

ಜರಾಂಗೆ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿ, ಕಣ್ಣೀರು ಹಾಕಿದರು. ಆಜಾದ್‌ ಮೈದಾನದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮರಾಠರಿಗೆ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಸಮುದಾಯದ ಜನರು ಮುಂಬೈನಲ್ಲಿ ವಿಜಯೋತ್ಸವ ಆಚರಿಸಿದರು –ಪಿಟಿಐ ಚಿತ್ರ
ಮೀಸಲಾತಿಯನ್ನು ಜಾರಿ ಮಾಡದೆ ನಮಗೆ ಮೋಸ ಮಾಡಿದರೆ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದರೆ ನಾನು ರಾಧಾಕೃಷ್ಣ ಅವರ ಮನೆಗೆ ಹೋಗಿ ಅಲ್ಲೇ ಕೂತು ಪ್ರಾಣ ಬಿಡುತ್ತೇನೆ
ಮನೋಜ್‌ ಜರಾಂಗೆ ಮರಾಠ ಮೀಸಲಾತಿ ಹೋರಾಟಗಾರ
ಮರಾಠರ ಅಭಿವೃದ್ಧಿಗಾಗಿಯೇ ನನ್ನ ಸರ್ಕಾರ ಸದಾ ಕೆಲಸ ಮಾಡುತ್ತದೆ. ಅದು ಮರಾಠರು ಅಥವಾ ಒಬಿಸಿ ಇರಲಿ ಎಲ್ಲ ಸಮುದಾಯಕ್ಕಾಗಿ ನಾವು ನಮ್ಮ ಕೆಲಸ ಮುಂದುವರಿಸುತ್ತೇವೆ
ದೇವೇಂದ್ರ ಫಡಣವೀಸ್‌ ಮಹಾರಾಷ್ಟ್ರ ಮುಖ್ಯಮಂತ್ರಿ
ನಾನೊಬ್ಬ ರೈತ. ನನ್ನ ಕಾಲ ಮುಗಿಯಿತು. ಆದರೆ ನನ್ನ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಲಿದ್ದಾರೆ. ಇದಕ್ಕಾಗಿ ಧನ್ಯವಾದಗಳು
ಭಾಗವತ್‌ ಸತ್ವಾಜಿ ಪ್ರತಿಭಟನಕಾರ
ಒಂದು ಸಮುದಾಯದಿಂದ ಮೀಸಲಾತಿಯನ್ನು ಕಿತ್ತುಕೊಂಡು ಮತ್ತೊಂದು ಸಮುದಾಯಕ್ಕೆ ನೀಡುವುದು ಅನ್ಯಾಯ
ಚಂದ್ರಶೇಖರ್‌ ಬಾವಂಕುಳೆ ಸಚಿವ

ಹೈಕೋರ್ಟ್‌ ತರಾಟೆ

‘ಅನುಮತಿ ಪಡೆಯದೆಯೇ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಂಗಳವಾರ ಮಧ್ಯಾಹ್ನ 3ರ ಒಳಗೆ ಆಜಾದ್‌ ಮೈದಾನವನ್ನು ಖಾಲಿ ಮಾಡಬೇಕು’ ಎಂದು ಬಾಂಬೆ ಹೈಕೋರ್ಟ್‌ ಹೇಳಿತ್ತು. ‘ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ’ ಎಂದು ರಾಜ್ಯ ಸರ್ಕಾರವನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಜರಾಂಗೆ ಅವರ ಮನವಿ ಮೇರೆಗೆ ಬುಧವಾರ ಬೆಳಿಗ್ಗೆವರೆಗೆ ಪ್ರತಿಭಟನೆ ನಡೆಸಲು ಕೋರ್ಟ್‌ ಅನುಮತಿ ನೀಡಿತ್ತು. ಈ ಬಳಿಕ ಸಂಪುಟದ ಉಪ ಸಮಿತಿಯ ಮುಖ್ಯಸ್ಥ ರಾಧಾಕೃಷ್ಣ ಅವರು ಜರಾಂಗೆ ಅವರನ್ನು ಮಧ್ಯಾಹ್ನದ ವೇಳೆಗೆ ಭೇಟಿ ಮಾಡಿದರು. ನೂರಾರು ಪ್ರತಿಭಟನಕಾರರು ದಕ್ಷಿಣ ಮುಂಬೈನ ಬೀದಿಗಳನ್ನು ಮತ್ತು ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ ಆವರಣದಲ್ಲಿ ಬೀಡುಬಿಟ್ಟಿದ್ದರು. ಇದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತಿತ್ತು. ‘ಜರಾಂಗೆ ಮತ್ತು ಅವರ ಅನುಯಾಯಿಗಳು ಮೈದಾನವನ್ನು ಖಾಲಿ ಮಾಡದೆ ಇದ್ದರೆ ದಂಡ ವಿಧಿಸಲಾಗುವುದು. ಇವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು’ ಎಂದೂ ಕೋರ್ಟ್ ಎಚ್ಚರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.